WPL: ಸೋಫಿ ಡಿವೈನ್​ ಸಾಹಸ; ಡೆಲ್ಲಿ ಎದುರು ಗುಜರಾತ್​ಗೆ ರೋಚಕ ಗೆಲುವು 
ಕ್ರಿಕೆಟ್

WPL: ಸೋಫಿ ಡಿವೈನ್​ ಸಾಹಸ; ಡೆಲ್ಲಿ ಎದುರು ಗುಜರಾತ್​ಗೆ ರೋಚಕ ಗೆಲುವು

ಮುಂಬೈ: ಆಲ್ರೌಂಡರ್​ ಸೋಫಿ ಡಿವೈನ್​ (95 ರನ್​, 42 ಎಸೆತ, 7 ಬೌಂಡರಿ, 8 ಸಿಕ್ಸರ್​, 21ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟದ ನೆರವಿನಿಂದ ಗುಜರಾತ್​ ಜೈಂಟ್ಸ್​ (Gujarat Giants) ತಂಡ ಡಬ್ಲ್ಯುಪಿಎಲ್ (Women''s Premier League)​ ನಾಲ್ಕನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ಎದುರು 4 ರನ್​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಸತತ 2ನೇ ಜಯದೊಂದಿಗೆ ಆಶ್ಲೆ ಗಾರ್ಡ್​ನರ್​ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಜೆಮೀಮಾ ರೋಡ್ರಿಗಸ್​ ನಾಯಕಿಯಾಗಿ ಸತತ 2ನೇ ಪಂದ್ಯದಲ್ಲೂ ಗೆಲುವು ಕಾಣಲು ವಿಫಲರಾದರು.

ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟೂರ್ನಿಯ 4ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್​, ಭರ್ತಿ 20 ಓವರ್​ಗಳಲ್ಲಿ 209 ರನ್​ ಗಳಿಸಿ ಆಲೌಟಾಯಿತು. ಗುಜರಾತ್​ ಸತತ 2ನೇ ಪಂದ್ಯದಲ್ಲಿ 200 ಪ್ಲಸ್​ ಮೊತ್ತ ಪೇರಿಸಿತು. ಡಿವೈನ್​ ಮತ್ತು ಬೆತ್​ ಮೂನಿ (19) ಮೊದಲ ವಿಕೆಟ್​ಗೆ 50 ಎಸೆತಗಳಲ್ಲೇ 94 ರನ್​ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಡಿವೈನ್​ ಕೇವಲ 5 ರನ್​ನಿಂದ ಶತಕವಂಚಿತರಾದರೆ, ನಾಯಕಿ ಆಶ್ಲೇ ಗಾರ್ಡ್​ನರ್​ (49 ರನ್​, 26 ಎಸೆತ, 4 ಬೌಂಡರಿ, 3 ಸಿಕ್ಸರ್​) ಬಿರುಸಿನ ಆಟವಾಡಿ ಗುಜರಾತ್​ ಮೊತ್ತ ಏರಿಸಿದರು. ವೇಗಿ ನಂದನಿ ಶರ್ಮ (33ಕ್ಕೆ 5) ಸ್ಲಾಗ್​ ಓವರ್​ಗಳಲ್ಲಿ ಬಿಗಿ ದಾಳಿ ಸಂಘಟಿಸಿ ಹ್ಯಾಟ್ರಿಕ್ ಸಾಧಿಸುವ ಮೂಲಕ ಗುಜರಾತ್​ಗೆ ಕಡಿವಾಣ ಹೇರಿದರು.

ಪ್ರತಿಯಾಗಿ ಲೈಜೆಲ್​ ಲೀ (86 ರನ್​, 54 ಎಸೆತ, 12 ಬೌಂಡರಿ, 3 ಸಿಕ್ಸರ್​) ಡೆಲ್ಲಿಗೆ ಬಿರುಸಿನ ಆರಂಭ ಒದಗಿಸಿದರು. ನಂತರ ಲಾರಾ ವೊಲ್ವಾರ್ಡ್​ (77 ರನ್​, 38 ಎಸೆತ, 9 ಬೌಂಡರಿ, 3 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದರೂ ಡೆಲ್ಲಿ 5 ವಿಕೆಟ್​ಗೆ 205 ರನ್​ ಗಳಿಸಲಷ್ಟೇ ಶಕ್ತಗೊಂಡಿತು. ಕೊನೇ ಓವರ್​ನಲ್ಲಿ 7 ರನ್​ ಬೇಕಿದ್ದಾಗ ಡಿವೈನ್ (Sophie Devine)​ ಕೇವಲ 2 ರನ್​ ನೀಡಿ 2 ವಿಕೆಟ್​ ಕಬಳಿಸುವ ಮೂಲಕ ಗುಜರಾತ್​ಗೆ ಸತತ 2ನೇ ಜಯ ತಂದರು.

ಗುಜರಾತ್​ ಜೈಂಟ್ಸ್​: 20 ಓವರ್​ಗಳಲ್ಲಿ 209 (ಮೂನಿ 19, ಸೋಫಿ ಡಿವೈನ್​ 95, ಗಾರ್ಡ್​ನರ್​ 49, ವೇರ್​ಹ್ಯಾಂ 3, ಅನುಷ್ಕಾ 13, ನಂದನಿ ಶರ್ಮ 33ಕ್ಕೆ 5, ಹೆನ್ರಿ 43ಕ್ಕೆ 2, ಶ್ರೀ ಚರಣಿ 42ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್​: 5 ವಿಕೆಟ್​ಗೆ 205 (ಲೈಜೆಲ್​ ಲೀ 86, ಶೆಫಾಲಿ 14, ವೊಲ್ವಾರ್ಡ್​ 77, ಹೆನ್ರಿ 7, ಜೆಮೀಮಾ 15, ರಾಜೇಶ್ವರಿ ಗಾಯಕ್ವಾಡ್​ 34ಕ್ಕೆ 2, ಡಿವೈನ್​ 21ಕ್ಕೆ 2).