ಗಾಲೆಯಲ್ಲಿ ದೇವದತ್ ಪಡಿಕ್ಕಲ್ ಶತಕದಾಟ: ಹಲವು ದಾಖಲೆ ಬರೆದ ಕರ್ನಾಟಕ ಬ್ಯಾಟರ್! 
ಕ್ರಿಕೆಟ್

ಗಾಲೆಯಲ್ಲಿ ದೇವದತ್ ಪಡಿಕ್ಕಲ್ ಶತಕದಾಟ: ಹಲವು ದಾಖಲೆ ಬರೆದ ಕರ್ನಾಟಕ ಬ್ಯಾಟರ್!

ಗಾಲೆ:

ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಹೆಚ್ಚಿನ ಸಮಯ ಮಳೆ ಮತ್ತು ಒದ್ದೆ ಮೈದಾನದಿಂದಾಗಿ ವ್ಯರ್ಥವಾದರೂ, ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (167 ರನ್, 230 ಎಸೆತ, 15 ಬೌಂಡರಿ, 1 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಧ್ರುವ ಜುರೆಲ್ (51 ರನ್, 68 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಶುಭಮಾನ್ ಗಿಲ್ ಬಳಗ ಸಂಪೂರ್ಣ ನಿಯಂತ್ರಣ ಸಾಧಿಸಿ ಸುಸ್ಥಿತಿಯಲ್ಲಿದೆ.


ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ಎರಡನೇ ದಿನದಾಟ, ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.15 ಗಂಟೆಗೆ ಆರಂಭಗೊಂಡಿತು. ಭಾರಿ ಮಳೆ ಜತೆಗೆ ಮೈದಾನ ತೇವಾಂಶದಿಂದ ಕೂಡಿದ್ದರಿಂದ ಆಟ ವಿಳಂಬಗೊಂಡಿತು.

2 ವಿಕೆಟ್‌ಗೆ 288 ರನ್‌ಗಳಿಂದ ಆಟ ಮುಂದುವರಿಸಿದ ಭಾರತ ತಂಡ, ಆತಿಥೇಯ ಸ್ಪಿನ್ನರ್‌ಗಳಾದ ಪ್ರಭಾತ್ ಜಯಸೂರ‌್ಯ (109ಕ್ಕೆ 4) ಹಾಗೂ ಕೇಶರ ನುವಂತ (175ಕ್ಕೆ 3) ಸುಧಾರಿತ ಬೌಲಿಂಗ್ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ದಿನದಂತ್ಯಕ್ಕೆ 116 ಓವರ್‌ಗಳಲ್ಲಿ 9 ವಿಕೆಟ್‌ಗೆ 460 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಬಾಲಗೋಂಚಿಗಳಾದ ಕುಲದೀಪ್ ಯಾದವ್ (12*) ಜತೆಗೆ ಕನ್ನಡಿಗ ಪ್ರಸಿದ್ಧಕೃಷ್ಣ (1*) ಸೋಮವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಂದ್ಯದ ಎರಡನೇ ದಿನ ನಿಗದಿತ 98 ಓವರ್‌ಗಳ ಪೈಕಿ 43 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಆದರೆ, ಶನಿವಾರ ಎರಡು ವಿಕೆಟ್ ಕಬಳಿಸಿದ್ದ ಲಂಕಾ ಬೌಲರ್‌ಗಳು ಎರಡನೇ ದಿನ ಏಳು ವಿಕೆಟ್ ಪಡೆದರು. ಪಿಚ್ ನಿಧಾನವಾಗಿ ಸ್ಪಿನ್ನರ್‌ಗಳಿಗೆ ನೆರವು ಒದಗಿಸಲು
ಆರಂಭಿಸಿದೆ.

167: ದೇವದತ್ ಪಡಿಕ್ಕಲ್ ಟೆಸ್ಟ್‌ನಲ್ಲಿ ಸ್ಟಂಪ್ ಔಟ್ ಆಗುವ ಸಮಯದಲ್ಲಿ 2ನೇ ಗರಿಷ್ಠ ರನ್ ಗಳಿಸಿದ್ದ ಭಾರತೀಯ ಬ್ಯಾಟರ್ ಎನಿಸಿದರು. ರೋಹಿತ್ ಶರ್ಮ ದಕ್ಷಿಣ ಆಫ್ರಿಕಾ ಎದುರು 176 ರನ್ ಗಳಿಸಿ ಸ್ಟಂಪ್ ಔಟ್ ಆಗಿದ್ದು ಗರಿಷ್ಠ.



4: ದೇವದತ್ ಪಡಿಕ್ಕಲ್ ಶ್ರೀಲಂಕಾದಲ್ಲಿ 4ನೇ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಭಾರತೀಯ ಎನಿಸಿದರು. ಸಚಿನ್ ತೆಂಡುಲ್ಕರ್ (203), ವೀರೇಂದ್ರ ಸೆಹ್ವಾಗ್ (201*), ಶಿಖರ್ ಧವನ್ (190) ಮೊದಲ 3 ಸ್ಥಾನದಲ್ಲಿದ್ದಾರೆ.



5: ದೇವದತ್ ಪಡಿಕ್ಕಲ್ ಶ್ರೀಲಂಕಾದಲ್ಲಿ 150 ಪ್ಲಸ್ ರನ್ ಗಳಿಸಿದ 5ನೇ ಭಾರತೀಯ ಎನಿಸಿದರು. ಸಚಿನ್, ಸೆಹ್ವಾಗ್, ಧವನ್, ಪೂಜಾರ ಹಿಂದಿನ ನಾಲ್ವರು ಸಾಧಕರು.

2: ದೇವದತ್ ಪಡಿಕ್ಕಲ್ ಶ್ರೀಲಂಕಾ ನೆಲದಲ್ಲಿ 3ನೇ ಕ್ರಮಾಂಕದಲ್ಲಿ 150 ರನ್ ಗಳಿಸಿದ 2ನೇ ಭಾರತೀಯರೆನಿಸಿದರು. 2017ರಲ್ಲಿ ಚೇತೇಶ್ವರ ಪೂಜಾರ (153) ಗಾಲೆಯಲ್ಲೇ ಈ ಸಾಧನೆ ಮಾಡಿದ್ದರು.
1. ಸ್ವಾತಂತ್ರ್ಯ ದಿನದಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ದೇವದತ್ ಪಡಿಕ್ಕಲ್. ವಿರಾಟ್ ಕೊಹ್ಲಿ ಗಣರಾಜ್ಯೋತ್ಸ ದಿನದಂದು ಈ ಸಾಧನೆ ಮಾಡಿದ್ದಾರೆ.
3. ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಟೆಸ್ಟ್ ಪಂದ್ಯಗಳನ್ನಾಡಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆಸ್ಟ್ರೇಲಿಯಾ, ಇಂಗ್ಲೆಂಡ್ ಹಿಂದಿನ ಸಾಧಕ ತಂಡಗಳು.
30. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸತತ 30ನೇ ಟೆಸ್ಟ್ ಪಂದ್ಯವನ್ನು 30 ವಿವಿಧ ಕ್ರೀಡಾಂಗಣದಲ್ಲಿ ಆಡಿದ ಮೂರನೇ ಭಾರತೀಯ ಆಟಗಾರ ಎನಿಸಿದ್ದು, ಒಂದೇ ಮೈದಾನದಲ್ಲಿ ಎರಡು ಪಂದ್ಯಗಳನ್ನಾಡಿಲ್ಲ. ಸಂಜಯ್ ಮಂಜ್ರೇಕರ್ ಹಾಗೂ ಸಚಿನ್ ತೆಂಡುಲ್ಕರ್ ಕ್ರಮವಾಗಿ ತಲಾ 33, 32 ವಿವಿಧ ಕ್ರೀಡಾಂಗಣಗಳಲ್ಲಿ ಟೆಸ್ಟ್ ಆಡಿದ ದಾಖಲೆ ಹೊಂದಿದ್ದಾರೆ.
9. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಕರ್ನಾಟಕದ 9ನೇ ಬ್ಯಾಟರ್ ದೇವದತ್ ಪಡಿಕ್ಕಲ್. ದಿಗ್ಗಜ ರಾಹುಲ್ ದ್ರಾವಿಡ್ ಸರ್ವಾಧಿಕ 36 ಟೆಸ್ಟ್ ಸೆಂಚುರಿ ಗಳಿಸಿರುವ ಕನ್ನಡಿಗ ಎನಿಸಿದ್ದಾರೆ.
8. ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಟೆಸ್ಟ್ ಶತಕ ಸಿಡಿಸಿದ 8ನೇ ಭಾರತೀಯ ಎಡಗೈ ಬ್ಯಾಟರ್. ವಿನೋದ್ ಕಾಂಬ್ಳೆ (4), ಸೌರವ್ ಗಂಗೂಲಿ (3) ಅಗ್ರ 2 ಸ್ಥಾನದಲ್ಲಿದ್ದಾರೆ.
2. 21ನೇ ಶತಮಾನದಲ್ಲಿ ಭಾರತ ಪರ ಮೂರನೇ ಕ್ರಮಾಂಕದಲ್ಲಿ ಟೆಸ್ಟ್ ಶತಕ ಸಿಡಿಸಿದ 2ನೇ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್. 2002ರಲ್ಲಿ ಸೌರವ್ ಗಂಗೂಲಿ ನವದೆಹಲಿಯಲ್ಲಿ ಜಿಂಬಾಬ್ವೆ ಎದುರು ಈ ಸಾಧನೆ ಮಾಡಿದ ಮೊದಲ ಎಡಗೈ ಬ್ಯಾಟರ್.
94: ದೇವದತ್ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಶತಕ ಸಿಡಿಸಿದ 94ನೇ ಬ್ಯಾಟರ್ ಎನಿಸಿದರು.