ಶಿಖರ್ ಧವನ್ಗೆ 5.7 ಕೋಟಿ ರೂ. ಮರಳಿಸಲು ಮಾಜಿ ಪತ್ನಿಗೆ ಕೋರ್ಟ್ ಆದೇಶ
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ಆರಂಭಿಕ ಶಿಖರ್ ಧವನ್ಗೆ (Shikhar Dhawan) 5.7 ಕೋಟಿ ರೂ. ಮೊತ್ತವನ್ನು ಶೇ. 9 ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಅವರ ಮಾಜಿ ಪತ್ನಿ (ex-wife) ಅಯೇಷಾ ಮುಖರ್ಜಿಗೆ ದೆಹಲಿ ಕೋರ್ಟ್ ಆದೇಶಿಸಿದೆ. ಇವರಿಬ್ಬರ ಆಸ್ತಿ ಇತ್ಯರ್ಥದ ವೇಳೆ ಆಸ್ಟ್ರೆಲಿಯಾದ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ದೆಹಲಿ ಕೋರ್ಟ್ ಅಮಾನ್ಯಗೊಳಿಸಿದೆ.
ಧವನ್ ಮತ್ತು ಅಯೇಷಾ ವಿವಾಹ ಭಾರತದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನಡೆದಿತ್ತು. ಹೀಗಾಗಿ ಇವರಿಬ್ಬರ ವೈವಾಹಿಕ ವಿವಾದ ಆಸ್ಟ್ರೆಲಿಯಾ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ದೆಹಲಿ ಕೋರ್ಟ್ ಸ್ಪಷ್ಟಪಡಿಸಿದೆ. ಆಸೀಸ್ ನೆಲದಲ್ಲಿ ಧವನ್, ಅಯೇಷಾ ಜತೆಗೂಡಿ ಖರೀದಿಸಿದ್ದ ಆಸ್ತಿಯನ್ನು ಮಾರಾಟ ಮಾಡಿದಾಗ ಬಂದ ಅವರ ಪಾಲಿನ ಮೊತ್ತ ಇದಾಗಿದೆ.
2012ರಲ್ಲಿ ಅಯೇಷಾ ಅವರನ್ನು ವಿವಾಹವಾಗಿದ್ದ ಶಿಖರ್ ಧವನ್ 2023ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂಬುದು ಅವರ ದೂರು ಆಗಿತ್ತು. ಅತ್ತ ಆಸ್ಟ್ರೇಲಿಯಾದಲ್ಲಿ ಧವನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಅಯೇಷಾ, ಅವರ ಆಸ್ತಿಯಲ್ಲಿ ಶೇ.60ರಷ್ಟು ಪಾಲು ಕೇಳಿದ್ದರು. ಆಸೀಸ್ ಕಾನೂನಿನ ಅನ್ವಯ ಇದಕ್ಕೆ ಅವಕಾಶವಿತ್ತು. ಆದರೆ ಭಾರತದಲ್ಲಿ ಹಿಂದೂ ಕಾನೂನಿನ ಅನ್ವಯ ಈ ರೀತಿಯ ಆಸ್ತಿ ಇತ್ಯರ್ಥಕ್ಕೆ ಅವಕಾಶವಿಲ್ಲ.