WPL: ಸತತ 4ನೇ ಬಾರಿ ಫೈನಲ್ಗೇರಿದ ಡೆಲ್ಲಿ ಕ್ಯಾಪಿಟಲ್ಸ್
ವಡೋದರ: ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (WPL) ಪ್ರಶಸ್ತಿ ಸುತ್ತಿಗೇರಿದೆ. ಲಿಝೆಲಿ ಲೀ (43 ರನ್, 24 ಎಸೆತ, 8 ಬೌಂಡರಿ, 1 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ಹಾಗೂ ಆಲ್ರೌಂಡರ್ ಚಿನೆಲ್ಲೆ ಹೆನ್ರಿ (35ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ 4ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು 7 ವಿಕೆಟ್ಗಳ ಗೆಲುವು ದಾಖಲಿಸಿತು. ಗುರುವಾರ ನಡೆಯಲಿರುವ ಫೈನಲ್ನಲ್ಲಿ ಮಾಜಿ ಚಾಂಪಿಯನ್ ಆರ್ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.
ಕೋಟಂಬಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಮಾದರಿಯ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವಿಕೆಟ್ ಕೀಪರ್-ಬ್ಯಾಟುಗಾರ್ತಿ ಬೆತ್ ಮೂನಿ (62* ರನ್, 51 ಎಸೆತ, 6 ಬೌಂಡರಿ) ಹಾಗೂ ಜಾರ್ಜಿಹಾ ವೇರ್ಹ್ಯಾಂ (35) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ 7 ವಿಕೆಟ್ಗೆ 168 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಲಿಝೆಲಿ ಲೀ ಮತ್ತು ಶೆಫಾಲಿ ವರ್ಮ (31 ರನ್, 21 ಎಸೆತ, 7 ಬೌಂಡರಿ) ಒದಗಿಸಿದ ಬಿರುಸಿನ ಆರಂಭ ಹಾಗೂ ನಾಯಕಿ ಜೆಮೀಮಾ ರೋಡ್ರಿಗಸ್ (41 ರನ್, 23 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 15.4 ಓವರ್ಗಳಲ್ಲಿ 3 ವಿಕೆಟ್ಗೆ 169 ರನ್ಗಳಿಸಿತು. ಈ ಮೂಲಕ 26 ಎಸೆತ ಇರುವಂತೆಯೇ ಗೆದ್ದ ಡೆಲ್ಲಿ, ಲೀಗ್ನ ಎರಡು ಪಂದ್ಯಗಳ ಕೊನೇ ಓವರ್ ಸೋಲಿಗೆ ಮುಯ್ಯಿ ತೀರಿಸಿತು. ಜತೆಗೆ 4ನೇ ಪ್ರಯತ್ನದಲ್ಲಾದರೂ ಪ್ರಶಸ್ತಿ ಗೆಲ್ಲುವ ಹಂಬಲದೊಂದಿಗೆ ಫೈನಲ್ಗೇರಿತು.
ಗುಜರಾತ್ ಜೈಂಟ್ಸ್: 7 ವಿಕೆಟ್ಗೆ 168 (ಬೆತ್ ಮೂನಿ 62*, ಸೋಫಿ ಡಿವೈನ್ 6, ಅನುಷ್ಕಾ ಶರ್ಮ 16, ಆಶ್ಲೇ ಗಾರ್ಡ್ನರ್ 0, ಕನಿಕಾ ಆಹುಜಾ 6, ಜಾರ್ಜಿಹಾ ವೇರ್ಹ್ಯಾಂ 35, ಭಾರತಿ 0, ಕಾಶ್ವಿ ಗೌತಮ್ 18, ಚಿನೆಲ್ಲೆ ಹೆನ್ರಿ 35ಕ್ಕೆ 3, ನಂದನಿ ಶರ್ಮ 44ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್: 15.4 ಓವರ್ಗಳಲ್ಲಿ 3 ವಿಕೆಟ್ಗೆ 169 (ಲಿಝೆಲಿ ಲೀ 43, ಶೆಫಾಲಿ ವರ್ಮ 31, ಲೌರಾ ವೋಲ್ವಾರ್ಡ್ 32*, ಜೆಮೀಮಾ ರೋಡ್ರಿಗಸ್ 41, ಮಾರಿಜಾನ್ ಕಾಪ್ 4*, ವೇರ್ ಹ್ಯಾಂ 28ಕ್ಕೆ 2).
ಆರ್ಸಿಬಿ-ಡೆಲ್ಲಿ ಕ್ಯಾಪಿಟಲ್ಸ್
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್