WPL: ಇಂದು ಗುಜರಾತ್-ಡೆಲ್ಲಿ ಎಲಿಮಿನೇಟರ್; ಗೆದ್ದವರು ಫೈನಲ್ನಲ್ಲಿ ಆರ್ಸಿಬಿಗೆ ಎದುರಾಳಿ
ವಡೋದರ: ಸತತ 4ನೇ ಬಾರಿ ಫೈನಲ್ಗೇರುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿರುವ ಗುಜರಾತ್ ಜೈಂಟ್ಸ್ (Gujarat Giants) ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್ (WPL) 4ನೇ ಆವೃತ್ತಿಯಲ್ಲಿ ಮಂಗಳವಾರ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಸೆಮಿಫೈನಲ್ ಮಾದರಿಯ ಈ ಕಾದಾಟದಲ್ಲಿ ಗೆದ್ದ ತಂಡ ಗುರುವಾರ ಆರ್ಸಿಬಿ (RCB) ಎದುರು ಪ್ರಶಸ್ತಿಗಾಗಿ ಹೋರಾಡುವ ಅವಕಾಶ ಪಡೆದುಕೊಳ್ಳಲಿದೆ.
ಮೊದಲ 3 ಆವೃತ್ತಿಯಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಡೆಲ್ಲಿ ಈ ಬಾರಿ ಜೆಮೀಮಾ ರೋಡ್ರಿಗಸ್ ಸಾರಥ್ಯದಲ್ಲಿ ಪ್ರಶಸ್ತಿ ಕನಸು ನನಸಾಗಿಸುವ ನಿರೀಕ್ಷೆಯಲ್ಲಿದೆ. ಲೀಗ್ ಹಂತದ ಎರಡೂ ಮುಖಾಮುಖಿಯಲ್ಲಿ ಗುಜರಾತ್ ಎದುರು ಕ್ರಮವಾಗಿ 3 ಮತ್ತು 4 ರನ್ಗಳಿಂದ ಸೋತಿದ್ದ ಡೆಲ್ಲಿ ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶವನ್ನೂ ಹೊಂದಿದೆ. ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಸೋತ ಬಳಿಕ ಪುಟಿದೆದ್ದು ಬಂದಿರುವ ಡೆಲ್ಲಿಗೆ ಬ್ಯಾಟಿಂಗ್ನಲ್ಲಿ ಲಾರಾ ವೊಲ್ವಾರ್ಡ್ (241), ಲೈಜೆಲ್ ಲೀ (240) ಮತ್ತು ಶೆಫಾಲಿ ವರ್ಮ (208) ಆಧಾರವಾಗಿದ್ದರೆ, ಬೌಲಿಂಗ್ನಲ್ಲಿ ಶ್ರೀ ಚರಣಿ (14), ಮಾರಿಜಾನ್ ಕಾಪ್ (10) ಬಲ ತುಂಬಿದ್ದಾರೆ. ನಾಯಕ ಜೆಮೀಮಾ ರೋಡ್ರಿಗಸ್ ರನ್ಬರವೊಂದೇ ಡೆಲ್ಲಿ ತಂಡವನ್ನು ಸದ್ಯ ಕಾಡುತ್ತಿರುವ ಹಿನ್ನಡೆಯಾಗಿದೆ.
ಗುಜರಾತ್ಗೆ ಮೊದಲ ಫೈನಲ್ ತವಕ
ಸತತ 2ನೇ ಬಾರಿ ಪ್ಲೇಆ್ ಹಂತಕ್ಕೇರಿರುವ ಗುಜರಾತ್ ಜೈಂಟ್ಸ್ ತಂಡ ಮೊಟ್ಟ ಮೊದಲ ಬಾರಿ ಫೈನಲ್ ಪ್ರವೇಶಿಸುವ ತವಕದಲ್ಲಿದೆ. ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದು ಬಳಿಕ ಸತತ 3 ಪಂದ್ಯ ಸೋತಿದ್ದ ಗುಜರಾತ್, ಲೀಗ್ನಲ್ಲಿ ಡೆಲ್ಲಿ ವಿರುದ್ಧದ ಎರಡೂ ಪಂದ್ಯ ಗೆದ್ದ ವಿಶ್ವಾಸ ಹೊಂದಿದೆ. ಅಲ್ಲದೆ ಸತತ 3 ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿರುವ ಆಶ್ಲೇ ಗಾರ್ಡ್ನರ್ ಬಳಗಕ್ಕೆ ಈ ಪೈಕಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವು ಹೆಚ್ಚಿನ ಬಲ ತುಂಬಿದೆ. ನ್ಯೂಜಿಲೆಂಡ್ ಆಲ್ರೌಂಡರ್ ಸೋಫಿ ಡಿವೈನ್ ಅನುಭವ ಗುಜರಾತ್ಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಅವರು 237 ರನ್ ಮತ್ತು 17 ವಿಕೆಟ್ ಗಳಿಸಿ ಮಿಂಚಿದ್ದಾರೆ. ಜತೆಗೆ ನಾಯಕಿ ಗಾರ್ಡ್ನರ್ (244), ಬೆತ್ ಮೂನಿ (196) ಬ್ಯಾಟಿಂಗ್ನಲ್ಲಿ ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (10), ಕಾಶ್ವಿ ಗೌತಮ್ (8), ರೇಣುಕಾ ಸಿಂಗ್ (7) ಬೌಲಿಂಗ್ನಲ್ಲಿ ಉಪಯುಕ್ತ ಕೊಡುಗೆ ನೀಡಿದ್ದಾರೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.