ಭಾರತ ಮಹಿಳೆಯರ ತಂಡದ ಆಟಗಾರ್ತಿ ದೀಪ್ತಿ ಶರ್ಮಾ
- ಪಾಕಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ ಭಾರತ ವನಿತೆಯರ ತಂಡ
- 64 ರನ್ಗಳಿಂದ ಪಾಕ್ ತಂಡವನ್ನು ಬಗ್ಗುಬಡಿದ ಹರ್ಮನ್ ಪಡೆ
- ಐದು ವಿಕೆಟ್ ಪಡೆದು ತಂಡದ ಪರ ಮಿಂಚಿದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಹೇಳಿಕೆ ವೈರಲ್
Deepti Sharma: ಪ್ರಸಕ್ತ ಅತೀಥೇಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿದ ಭಾರತ 64 ರನ್ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ, 171 ರನ್ಗಳ ಗುರಿಯನ್ನು ನೀಡಿತು. ಇದನ್ನು ಬೆನ್ನತ್ತಿದ ಪಾಕ್ ಬ್ಯಾಟ್ಸ್ವುಮನ್ಗಳ ಪೈಕಿ ಯಾರೊಬ್ಬರು ಕ್ರೀಸ್ ಅಂಟಿ ನಿಲ್ಲಲು ಸಾಧ್ಯವಾಗಲಿಲ್ಲ. ಭಾರತೀಯ ಬೌಲರ್ಗಳ ದಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದರು. ಈ ಪೈಕಿ, ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ 5 ಮುಖ್ಯ ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.
4 ಓವರ್ ಮಾಡಿದ ದೀಪ್ತಿ, ಕೇವಲ 10 ರನ್ ಕೊಟ್ಟು 5 ವಿಕೆಟ್ ಪಡೆದ ಕಾರಣ, ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಒಲಿಯಿತು. ತಮ್ಮ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸ್ಟಾರ್ ಆಟಗಾರ್ತಿ, ಈ ಗೆಲುವಿಗೆ ಭಗವಂತ ಆಂಜನೇಯನೇ ಕಾರಣ ಎಂದರು. ಪಿಚ್‌ನಲ್ಲಿ ಬಾಲ್ ತುಂಬ ತಿರುಗುತ್ತಿತ್ತು. ನನಗೆ ಈ ರೀತಿಯ ಪಿಚ್‌ಗಳು ಇಷ್ಟ. ನನ್ನ ಪ್ರದರ್ಶನ ಖುಷಿ ತಂದಿದೆ. ಹನುಮಾನ್ ಜೀ ಶ್ರೇಷ್ಠ. ಪಾಕ್ ವಿರುದ್ಧದ ಗೆಲುವಿಗೆ ಕಾರಣ ನಮ್ಮ ತಂಡ. ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂದು ದೀಪ್ತಿ ಶರ್ಮಾ ಹೇಳಿದರು.
ಯಾವಾಗ ಬಾಲ್ ತಿರುಗಲು ಶುರುವಾಯಿತೋ, ಆಗಲೇ ಪ್ರತಿ ಎಸೆತ ಮತ್ತು ಪ್ರತಿ ಓವರ್‌ನೊಂದಿಗೆ ಚೆಂಡಿನ ವೇಗವನ್ನು ಬದಲಾಯಿಸುತ್ತಲೇ ಇದ್ದೆ. ಈ ಟೆಕ್ನಿಕ್ ತುಂಬಾ ಉಪಯೋಗಕ್ಕೆ ಬಂದಿತು. ಎದುರಾಳಿ ಬ್ಯಾಟ್ಸ್‌ವುಮನ್‌ಗಳು ನನ್ನ ಬೌಲಿಂಗ್ ಆಡಲು ತೀರ ಹೆಣಗಾಡಿದರು. ಲೈನ್ ಮತ್ತು ಲೆಂಥ್ನಲ್ಲಿ ಬೌಲಿಂಗ್ ಮಾಡುವತ್ತ ನನ್ನ ಗಮನವಿತ್ತು. ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಉತ್ತಮ ಬ್ಯಾಟಿಂಗ್ ಈ ಪಂದ್ಯದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದರು,(ಏಜೆನ್ಸೀಸ್).