DC vs RR ಪಂದ್ಯದ ವೇಳೆ ನಡೆದ ಘಟನೆ
- ನಿನ್ನೆ (ಮೇ.02) ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ 7 ವಿಕೆಟ್ಗಳ ಜಯ
- ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದ 6 ಅಡಿ ಎತ್ತರದ ಡೆಲ್ಲಿ ವೇಗಿಗೆ ಬಿಸಿಸಿಐ ದಂಡ
- ಕೈಲ್ ಜೇಮಿಸನ್ ಹುಚ್ಚು ಸಂಭ್ರಮದ ವಿಡಿಯೋ ವೈರಲ್
DC vs RR: 19ನೇ ಆವೃತ್ತಿಯ ಐಪಿಎಲ್ ಭಾಗವಾಗಿ ಶುಕ್ರವಾರ (ಮೇ.01) ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ 7 ವಿಕೆಟ್ಗಳಿಂದ ಅಕ್ಷರ್ ಪಟೇಲ್ ಪಡೆ ರೋಚಕ ಜಯ ಸಾಧಿಸಿತು.
226 ರನ್ಗಳ ಬೃಹತ್ ಗುರಿಯನ್ನು 3 ವಿಕೆಟ್ಗಳಲ್ಲಿ ಬೆನ್ನಟ್ಟಿದ ಡೆಲ್ಲಿ ಪಡೆಗೆ ಖುಷಿ ತಂದರೆ, ಅದೇ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ರಾಜಸ್ಥಾನ ರಾಯಲ್ಸ್ ಪರ ಬ್ಯಾಟಿಂಗ್ಗಿಳಿದ 15 ವರ್ಷದ ವೈಭವ್ ಸೂರ್ಯವಂಶಿ ಎಂದಿನಂತೆ ಸ್ಫೋಟಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ ಓವರ್ನಲ್ಲೇ ಯಾವ ತಂಡದ ಬೌಲರ್ ಆದರೂ ಮುಖ ಮೂತಿ ನೋಡದೆ, ಸಿಕ್ಸರ್ಗಳನ್ನು ಸಿಡಿಸುವ ವೈಭವ್, 6.8 ಅಡಿ ಎತ್ತರದ ವೇಗಿ ಕೈಲ್ ಜೇಮಿಸನ್ ಅವರ ಓವರ್ನಲ್ಲಿ ಕೇವಲ 4 ರನ್ಗೆ ವಿಕೆಟ್ ಕಳೆದುಕೊಂಡರು.
ಪಂದ್ಯದ ಮೊದಲ ಎಸೆತದಲ್ಲಿ ಬೌಂಡರಿ ಹೊಡೆದ ವೈಭವ್ ಸೂರ್ಯವಂಶಿ, ಎರಡನೇ ಎಸೆತದಲ್ಲಿ ಜೇಮಿಸನ್ ಅವರ ಯಾರ್ಕರ್ ಬಾಲ್ಗೆ ಕ್ಲೀನ್ ಬೌಲ್ಡ್ ಆದರು. ಸ್ಫೋಟಕ ಬ್ಯಾಟಿಂಗ್ ಮಾಡುವ ವೈಭವ್ ವಿಕೆಟ್ ಹೋಗುತ್ತಿದ್ದಂತೆ ಕಿರುಚಾಡಿದ ಜೇಮಿಸನ್, ವಿಕೆಟ್ ಕಳೆದುಕೊಂಡು ಬೇಸರದಿಂದ ಪೆವಿಲಿಯನ್ ಹಾದಿಯತ್ತ ಮುಖಮಾಡಿದ್ದ ಸೂರ್ಯವಂಶಿ ಎದುರು ಚಪ್ಪಾಳೆ ತಟ್ಟಿ ಕಳುಹಿಸಿದ ರೀತಿ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಕೆಲವರಿಗೆ, ಇಂತಹ ಹುಚ್ಚು ಸಂಭ್ರಮದ ಅಗತ್ಯವೇನಿತ್ತು? ಎಂದು ಅನಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಿಸಿಸಿಐ, ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವೇಗಿಗೆ ದಂಡದ ಬಿಸಿ ಮುಟ್ಟಿಸಿದೆ.
ಈ ಸೀಸನ್ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದ ಖುಷಿಗೆ ಕೈಲ್ ಜೇಮಿಸನ್ ಸ್ವಲ್ಪ ಅಲ್ಲ, ಮಿತಿ ಮೀರಿ ಮೈದಾನದಲ್ಲಿ ಸಂಭ್ರಮಿಸಿದರು. ವೈಭವ್‌ಗೆ ತುಂಬಾ ಹತ್ತಿರ ಬಂದು ಕೂಗಿದ ಕೈಲ್, ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಪೆವಿಲಿಯನ್ಗೆ ಹೋಗುವಂತೆ ಹೇಳಿದ್ದು, ಕ್ರಿಕೆಟ್ ಪ್ರಿಯರಿಗೆ ಕಿಂಚಿತ್ತು ಹಿಡಿಸಲಿಲ್ಲ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಮರಗಳಂತೆ ಬೆಳೆದರೆ ಸಾಲದು, ಚಿಕ್ಕ ವಯಸ್ಸಿನವರೊಂದಿಗೆ ಹೇಗೆ ವರ್ತಿಸಬೇಕೆಂದು ಗೊತ್ತಿರಬೇಕು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ದಂಡದ ಬಿಸಿ
ವೈಭವ್ ಸೂರ್ಯವಂಶಿ ವಿರುದ್ಧ ತೋರಿದ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕೈಲ್ ಜೇಮಿಸನ್ ವಿರುದ್ಧ ಬಿಸಿಸಿಐ ಸಿಟ್ಟಾಗಿದೆ. ಪಂದ್ಯದ ವೇಳೆ ನಡೆದುಕೊಂಡ ರೀತಿಗೆ ಕಿವೀಸ್ ವೇಗಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿರುವುದು ಸ್ಪಷ್ಟ ಎಂದು ತಿಳಿಸಿದೆ.
ಈ ನಿಯಮ, ಪಂದ್ಯದಲ್ಲಿ ಒಬ್ಬ ಆಟಗಾರನಿಗೆ ಅವಮಾನಕರ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಜೇಮೀಸನ್ಗೆ ಪಂದ್ಯದ ಅಂಪೈರ್ ರಾಜೀವ್ ಸೇಠ್ ದಂಡವನ್ನು ವಿಧಿಸಲು ಸೂಚಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).