ಡೇವಿಸ್ ಕಪ್ ಟೆನಿಸ್: ಡಬಲ್ಸ್‌ನಲ್ಲಿ ಗೆದ್ದರೂ ಭಾರತಕ್ಕೆ ಹಿಂಬಡ್ತಿ 
ಕ್ರಿಕೆಟ್

ಡೇವಿಸ್ ಕಪ್ ಟೆನಿಸ್: ಡಬಲ್ಸ್‌ನಲ್ಲಿ ಗೆದ್ದರೂ ಭಾರತಕ್ಕೆ ಹಿಂಬಡ್ತಿ

ಗುರುರಾಜ್ ಬಿ.ಎಸ್
ಸಿಯೋಲ್: ಟೆನಿಸ್ ವಿಶ್ವಕಪ್ ಖ್ಯಾತಿಯ ಡೇವಿಸ್ ಕಪ್ ಟೂರ್ನಿಯ ಫೈನಲ್ 8ರ ಅರ್ಹತೆ (ಹೊಸ ಸ್ವರೂಪ) ಪಡೆದ ಏಷ್ಯಾದ ಮೊದಲ ದೇಶ ಎಂಬ ದಾಖಲೆ ರಚಿಸುವ ಅವಕಾಶವನ್ನು ಭಾರತ ತಂಡ ಕೈಚೆಲ್ಲಿತು. ಕ್ವಾಲಿಫೈಯರ್ ಎರಡನೇ ಸುತ್ತಿನಲ್ಲಿ ಭಾರತ ತಂಡ 1-3 ಅಂತರದಿಂದ ಆತಿಥೇಯ ದಕ್ಷಿಣ ಕೊರಿಯಾ ಎದುರು ಸೋಲು ಅನುಭವಿಸಿತು. ಇದರೊಂದಿಗೆ ಮುಂದಿನ ವರ್ಷದ ಡೇವಿಸ್ ಕಪ್ ಪುರುಷರ ಟೂರ್ನಿಯ ಕ್ವಾಲಿಫೈಯರ್ ಮೊದಲ ಸುತ್ತಿಗೆ ಭಾರತ ಹಿಂಬಡ್ತಿ ಪಡೆಯಿತು.
ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಅನುಭವಿ ಎನ್. ಶ್ರೀರಾಮ್ ಬಾಲಾಜಿ ಜತೆಯಾಗಿ ಯುವ ತಾರೆ ದಕ್ಷಿಣೇಶ್ವರ್ ಸುರೇಶ್ ಕಣಕ್ಕಿಳಿದರು. ನಿರ್ಣಾಯಕ ಪಂದ್ಯದಲ್ಲಿ ಎನ್. ಶ್ರೀರಾಮ್ ಬಾಲಾಜಿ-ದಕ್ಷಿಣೇಶ್ವರ್ ಸುರೇಶ್ 6-3, 3-6, 6-3 ರಿಂದ ಹುಯಿ ಸುಂಗ್ ಪರ್ಕ್-ಜಿಸುಂಗ್ ನಮ್ ಜೋಡಿ ಎದುರು ಗೆಲುವು ದಾಖಲಿಸಿತು. 1 ಗಂಟೆ 44 ನಿಮಿಷ ನಡೆದ ಮೂರು ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಶ್ರೀರಾಮ್ ಬಾಲಾಜಿ-ದಕ್ಷಿಣೇಶ್ವರ್ ಸುರೇಶ್ ಭಾರತದ ಆಸೆ ಜೀವಂತವಿರಿಸಿದರು.
ನಂತರ ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ವಿಶ್ವ ನಂ. 247 ಸುಮಿತ್ ನಗಾಲ್ 1-6, 2-6 ನೇರ ಸೆಟ್‌ಗಳಿಂದ ವಿಶ್ವ ನಂ. 157 ಸುನ್ವೂ ಕ್ವೊನ್ ಎದುರು ಮುಗ್ಗರಿಸಿದರು. ಇದರೊಂದಿಗೆ ಇನ್ನೊಂದು ರಿವರ್ಸ್ ಸಿಂಗಲ್ಸ್ ಪಂದ್ಯ ಬಾಕಿಯಿರುವಂತೆಯೆ 1-3ರಿಂದ ದಕ್ಷಿಣ ಕೊರಿಯಾ ಮೊದಲ ಬಾರಿಗೆ ಕ್ವಾರ್ಟರ್​ಫೈನಲ್‌ಗೇರಿತು. ಜತೆಗೆ ಈ ಸಾಧನೆ ಮಾಡಿದ ಏಷ್ಯಾದ ಮೊದಲ ತಂಡ ಎನಿಸಿತು. ಭಾರತ ತಂಡ ಮುಂದಿನ ಫೆಬ್ರವರಿಯಲ್ಲಿ ಕ್ವಾಲಿಫೈಯರ್ ಮೊದಲ ಸುತ್ತು ಆಡಲಿದೆ. ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿರುವ ರೋಹಿತ್ ರಾಜ್‌ಪಾಲ್ ಅವರಿಗೆ ಭಾರತ ತಂಡದ ಆಡದ ನಾಯಕನಾಗಿ ಕೊನೇ ಡೇವಿಸ್ ಕಪ್ ಪಂದ್ಯವೂ ಇದಾಗಿದೆ. ಮುಂಬರುವ ಡಿಸೆಂಬರ್‌ನಲ್ಲಿ ಅವರ ಅವಧಿ ಮುಕ್ತಾಯಗೊಳ್ಳಲಿದ್ದು, ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.