ಡೇವಿಸ್ ಕಪ್: ಮೊದಲ ದಿನವೇ ಭಾರತಕ್ಕೆ 0-2 ಹಿನ್ನಡೆ 
ಕ್ರಿಕೆಟ್

ಡೇವಿಸ್ ಕಪ್: ಮೊದಲ ದಿನವೇ ಭಾರತಕ್ಕೆ ಹಿನ್ನಡೆ

ಸಿಯೋಲ್: ಡೇವಿಸ್ ಕಪ್ ಪುರುಷರ ಟೆನಿಸ್ ಟೂರ್ನಿಯ ಫೈನಲ್ 8ರ ಹಂತಕ್ಕೇರುವ ಭಾರತ ತಂಡದ ಕನಸಿಗೆ ಹಿನ್ನಡೆ ಎದುರಾಗಿದೆ. ಕ್ವಾಲಿಫೈಯರ್ ಎರಡನೇ ಸುತ್ತಿನ ಮೊದಲ ದಿನವೇ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಯುವತಾರೆ ದಕ್ಷಿಣೇಶ್ವರ್ ಸುರೇಶ್ ಹಾಗೂ ಅನುಭವಿ ಸುಮಿತ್ ನಗಾಲ್ ಸೋಲು ಅನುಭವಿಸಿದ್ದು, ಭಾರತ ತಂಡ 0-2ರಿಂದ ಆತಿಥೇಯ ದಕ್ಷಿಣ ಕೊರಿಯಾ ಎದುರು ಹಿನ್ನಡೆ ಕಂಡಿದೆ. ಟೂರ್ನಿಯ ಮುಂದಿನ ಹಂತಕ್ಕೇರಲು ಶನಿವಾರ ನಡೆಯಲಿರುವ 3 ಪಂದ್ಯಗಳಲ್ಲೂ (ಡಬಲ್ಸ್, 2 ಸಿಂಗಲ್ಸ್) ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಸಿಯೋಲ್ ಒಲಿಂಪಿಕ್ ಪಾರ್ಕ್ ಟೆನಿಸ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 26 ವರ್ಷದ ದಕ್ಷಿಣೇಶ್ವರ್ ಸುರೇಶ್ 6-3, 3-6, 4-6ರಿಂದ 3 ಸೆಟ್‌ಗಳ ಸೆಣಸಾಟದಲ್ಲಿ ವಿಶ್ವ ನಂ. 157 ಸುನ್ವೂ ಕ್ವೊನ್ ಎದುರು ಸೋಲು ಅನುಭವಿಸಿದರು. ವಿಶ್ವ ನಂ.367 ದಕ್ಷಿಣೇಶ್ವರ್ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದರೂ, ನಂತರದ 2 ಸೆಟ್‌ನಲ್ಲಿ ನಿರಾಸೆ ಅನುಭವಿಸಿದರು. ಇದುವರೆಗೆ ಡೇವಿಸ್ ಕಪ್‌ನಲ್ಲಿ ಆಡಿದ 5ರಲ್ಲಿ ದಕ್ಷಿಣೇಶ್ವರ್‌ಗೆ ಮೊದಲ ಸೋಲು ಇದಾಗಿದೆ.
ನಂತರ ಎರಡನೇ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ತಾರೆ ಸುಮಿತ್ ನಗಾಲ್ 6-2, 4-6, 5-7ರಿಂದ ಹಿಯಾನ್ ಚುಂಗ್ ಎದುರು ಪರಾಭವಗೊಂಡರು. ಮೂರು ಗಂಟೆ 6 ನಿಮಿಷಗಳ ಪೈಪೋಟಿಯಲ್ಲಿ ನಗಾಲ್, ಮೊದಲ ಸೆಟ್ ಗೆದ್ದರೂ ಬಳಿಕ ತನಗಿಂತ 300 ಸ್ಥಾನ ಕೆಳಗಿರುವ ಆಟಗಾರನ ಎದುರು ಮುಗ್ಗರಿಸಿದರು.
ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿದ್ದು, ಅನುಭವಿ ಎನ್. ಶ್ರೀರಾಮ್ ಬಾಲಾಜಿ-ನಿಕಿ ಪೂಣಚ ಜತೆಯಾಗಿ ಆಡಲಿದ್ದಾರೆ. ಭಾರತ ಉಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರಷ್ಟೇ, 1996ರ ಡೇವಿಸ್ ಕಪ್ ಕ್ವಾರ್ಟರ್​ಫೈನಲ್​ಗೇರಬಹುದಾಗಿದೆ. 2010, 2018ರಲ್ಲಿ ಕ್ರಮವಾಗಿ ಬ್ರೆಜಿಲ್, ಚೀನಾ ಎದುರು 0-2 ಹಿನ್ನಡೆಯ ನಡುವೆಯೂ ಪುಟಿದೆದ್ದು ಗೆಲುವು ಕಂಡಿರುವ ಭಾರತ ಅದೇ ಸಾಧನೆ ಪುನರಾವರ್ತಿಸುವ ಅನಿವಾರ್ಯತೆಯಲ್ಲಿದೆ.