ಕೊನೇ ಓವರ್​ ಥ್ರಿಲ್ಲಿಂಗ್​... ಆ ಒಂದು ತಪ್ಪಿನಿಂದಾಗಿ ಡೇವಿಡ್​ ಮಿಲ್ಲರ್​ ವಿರುದ್ಧ ಕೇಳಿಬಂತು ಗಂಭೀರ ಆರೋಪ! David Miller  
ಕ್ರಿಕೆಟ್

ಕೊನೇ ಓವರ್​ ಥ್ರಿಲ್ಲಿಂಗ್​... ಆ ಒಂದು ತಪ್ಪಿನಿಂದಾಗಿ ಡೇವಿಡ್​ ಮಿಲ್ಲರ್​ ವಿರುದ್ಧ ಕೇಳಿಬಂತು ಗಂಭೀರ ಆರೋಪ! David Miller

ಪ್ರಮುಖ ಮುಖ್ಯಾಂಶಗಳು

  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್‌ನಿಂದ ರೋಚಕ ಜಯ ಸಾಧಿಸಿದ ಗುಜರಾತ್ ಟೈಟಾನ್ಸ್
  • ಗೆಲುವಿಗೆ 2 ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಸಿಂಗಲ್ ನಿರಾಕರಿಸಿದ ಡೇವಿಡ್ ಮಿಲ್ಲರ್
  • ಗೆಲ್ಲುವ ಅವಕಾಶವಿದ್ದರೂ ಮಿಲ್ಲರ್ ರನ್ ಗಳಿಸದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶ
  • ಪಂದ್ಯದ ಬಳಿಕ ಕಣ್ಣೀರು ಹಾಕಿದ ಡೇವಿಡ್ ಮಿಲ್ಲರ್ ಅವರಿಗೆ ಅಕ್ಷರ್ ಪಟೇಲ್ ಸಾಂತ್ವನ ಹೇಳಿದ್ದು, ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಯಿತು
David Miller : ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯವು ತುಂಬಾ ರೋಚಕವಾಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ( ಡಿಸಿ ) ತಂಡ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಕೇವಲ ಒಂದು ರನ್​ನಿಂದ ಸೋಲುಂಡಿತು. ಅದರಲ್ಲೂ ಕೊನೆಯ ಓವರ್​ ಅಂತೂ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದ ಕ್ಲೈಮ್ಯಾಕ್ಸ್​ನಂತಿತ್ತು. 
ಹೌದು, ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್​ನಲ್ಲಿ ಎರಡು ಎಸೆತಗಳಲ್ಲಿ ಎರಡು ರನ್​ಗಳ ಅವಶ್ಯಕತೆ ಇತ್ತು. ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶ ಡೇವಿಡ್​ ಮಿಲ್ಲರ್​​ಗೆ ಸಿಕ್ಕಿತು. ಆದರೂ, ರನ್​ ತೆಗೆದುಕೊಳ್ಳದೇ ಪಂದ್ಯವನ್ನು ತಾವೇ ಮುಗಿಸುವ ಭರವಸೆ ಇಟ್ಟುಕೊಂಡಿದ್ದರು. ಆದರೆ, ಆ ಭರವಸೆ ಹುಸಿಯಾಯಿತು. ಕೊನೆಯ ಎಸೆತದಲ್ಲಿ 2 ರನ್​ ಬೇಕಿದ್ದಾಗ ಪ್ರಸಿದ್ಧ ಕೃಷ್ಣ ಅವರು ಸ್ಲೌ ಬೌನ್ಸರ್ ಹಾಕಿದರು. ಇದರಿಂದ ಗೊಂದಲಕ್ಕೆ ಒಳಗಾದ ಮಿಲ್ಲರ್, ಆ ಚೆಂಡನ್ನು ಮಿಸ್​ ಮಾಡಿದರು. ಈ ವೇಳೆ ಬೈ​ ರನ್ ಪಡೆಯುವ ಪ್ರಯತ್ನದಲ್ಲಿ ಓಡಿದರು. ಆದರೆ, ಕೀಪರ್ ಜೋಸ್ ಬಟ್ಲರ್ ನಾನ್-ಸ್ಟ್ರೈಕರ್​ನಲ್ಲಿದ್ದ ವಿಪ್ರಜ್ ನಿಗಮ್ ಅವರನ್ನು ರನೌಟ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 209 ರನ್ ಗಳಿಗೆ ಸೀಮಿತಗೊಳಿಸಿದರು.
ವಾಸ್ತವವಾಗಿ, ಮಿಲ್ಲರ್ ಓರ್ವ ವಿನಾಶಕಾರಿ ಬ್ಯಾಟರ್​. ಅವರು ಐಪಿಎಲ್‌ನಲ್ಲಿ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವಿಶ್ವಾಸಾರ್ಹ ಫಿನಿಷರ್ ಎಂದು ಡೇವಿಡ್ ಮಿಲ್ಲರ್ ಪ್ರಸಿದ್ಧರಾಗಿದ್ದಾರೆ. ಪಂಜಾಬ್ ಕಿಂಗ್ಸ್ (2012-2019) ಜೊತೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ, ರಾಜಸ್ಥಾನ ರಾಯಲ್ಸ್ (2020-2021) ಮತ್ತು ಗುಜರಾತ್ ಟೈಟಾನ್ಸ್ (2022-2024) ಪರ ಆಡಿದ್ದಾರೆ. ಪ್ರಸ್ತುತ ಡೆಲ್ಲಿ ತಂಡದಲ್ಲಿದ್ದಾರೆ.
2022 ರಲ್ಲಿ ಗುಜರಾತ್ ಚಾಂಪಿಯನ್ ಆಗುವಲ್ಲಿ ಮಿಲ್ಲರ್​ ಅವರು ಪ್ರಮುಖ ಪಾತ್ರ ವಹಿಸಿದರು. ಏಕೆಂದರೆ, ವೈಯಕ್ತಿಕವಾಗಿ 481 ರನ್​ಗಳನ್ನು ಗಳಿಸಿದ್ದರು. ಒಂದು ಸಂದರ್ಭದಲ್ಲಿ, ಮಿಲ್ಲರ್ ಕ್ರೀಸ್‌ನಲ್ಲಿದ್ದಾಗ ಬೌಲರ್‌ಗಳು ಆತಂಕಕ್ಕೊಳಗಾಗುತ್ತಿದ್ದರು. ಚೆಂಡನ್ನು ಹೇಗೆ ಎಸೆಯಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಿದ್ದರು. ಅಂತಹ ಸ್ಟಾರ್ ಬ್ಯಾಟ್ಸ್‌ಮನ್ ಕೊನೆಯ ಓವರ್‌ನಲ್ಲಿ ಹೀಗೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.
ನಿನ್ನೆಯ ಪಂದ್ಯದಲ್ಲಿ ಮಿಲ್ಲರ್ ಅವರ ವರ್ತನೆಯನ್ನು ಡೆಲ್ಲಿ ಕ್ಯಾಪಿಟಲ್ಸ್​ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಅವಕಾಶ ಸಿಕ್ಕಿದ್ದರೂ ಐದನೇ ಎಸೆತದಲ್ಲಿ ಒಂದೇ ಒಂದು ರನ್ ಗಳಿಸದಿದ್ದಕ್ಕಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಿಲ್ಲರ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮಿಲ್ಲರ್ ಎರಡು ಎಸೆತಗಳಲ್ಲಿ ಎರಡು ರನ್ ಗಳಿಸದ ಸ್ಥಿತಿಯಲ್ಲಿದ್ದಾರೆಯೇ? ಎಂದು ಟ್ರೋಲ್ ಮಾಡುತ್ತಿದ್ದಾರೆ. 
ಆದರೆ, ಪಂದ್ಯದ ನಂತರ ಮಿಲ್ಲರ್ ಕಣ್ಣೀರು ಹಾಕಿದರು. ತಮ್ಮದೇ ತಪ್ಪುಗಳಿಂದ ಪಂದ್ಯ ಸೋತಿದ್ದಕ್ಕೆ ಅವರಿಗೆ ಬೇಸರವಾಯಿತು. ಹೀಗಾಗಿ, ಅಕ್ಷರ್ ಪಟೇಲ್ ಅವರು ಮಿಲ್ಲರ್​ ಬಳಿ ಬಂದು ಸಾಂತ್ವನ ಹೇಳಿದರು. ಸದ್ಯ ನಿನ್ನೆಯ ಪಂದ್ಯ ಸಾಕಷ್ಟು ಚರ್ಚೆಗೀಡಾಗುತ್ತಿದೆ. ನಿಮ್ಮ ಪ್ರಕಾರ ಮಿಲ್ಲರ್​ ಮಾಡಿದ್ದು ತಪ್ಪೇ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ, (ಏಜೆನ್ಸೀಸ್​).