ಮಹಾರಾಣಿ ಟ್ರೋಫಿ ಟಿ20 ಆರಂಭಕ್ಕೆ ದಿನಾಂಕ ಫಿಕ್ಸ್: ಸಿ. ಪ್ರತ್ಯೂಷಾಗೆ ಗರಿಷ್ಠ ಬಿಡ್
ಬೆಂಗಳೂರು: ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 ಎರಡನೇ ಆವೃತ್ತಿಗೆ ಪೂರ್ವಭಾವಿಯಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಗುರುವಾರ ಮಹಿಳಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಡೆಯಿತು. ಆಲ್ರೌಂಡರ್ ಪ್ರತ್ಯೂಷಾ ಚಲ್ಲೂರು ಹರಾಜಿನಲ್ಲಿ ಗರಿಷ್ಠ 4.50 ಲಕ್ಷ ರೂಪಾಯಿ ಬಿಡ್ ಪಡೆಯುವ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ಫ್ರಾಂಚೈಸಿ ಸೇರಿದರೆ, ಭಾರತ ಮಹಿಳಾ ಟೆಸ್ಟ್ ತಂಡದ ಆಟಗಾರ್ತಿ ಶುಭಾ ಸತೀಶ್ ಮತ್ತು ವೃಂದಾ ದಿನೇಶ್ ತಲಾ 4.20 ಲಕ್ಷ ರೂ.ಗಳಿಗೆ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್ ತಂಡ ಪಾಲಾದರು.
4 ಕೆಟಗರಿಯಲ್ಲಿ ನಡೆದ ಹರಾಜಿನ ಎ ವಿಭಾಗದಲ್ಲಿದ್ದ ಡಬ್ಲುೃಪಿಎಲ್, ಅಂತಾರಾಷ್ಟ್ರೀಯ ಆಟಗಾರ್ತಿಯರು ಮೂಲಬೆಲೆ 1 ಲಕ್ಷ ರೂ., ಕರ್ನಾಟಕದ ಹಿರಿಯ ಆಟಗಾರ್ತಿಯರು (ಬಿ) 75 ಸಾವಿರ ರೂ., 23 ವಯೋಮಿತಿ ಜತೆಗೆ ಜೂನಿಯರ್ ಆಟಗಾರ್ತಿಯರು (ಸಿ) 50 ಸಾವಿರ ರೂ., ಕೆಎಸ್‌ಸಿಎ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದವರು (ಡಿ) ತಲಾ 30 ಸಾವಿರ ರೂ.ಗಳ ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಸ್ಥಾನ ಪಡೆದಿದ್ದರು. ಪ್ರತಿ ್ರಾಂಚೈಸಿ ತಲಾ 20 ಲಕ್ಷ ರೂ.ಗಳ ಬಜೆಟ್ ಮಿತಿ ಹೊಂದಿದ್ದವು.
2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 27 ವರ್ಷದ ಪ್ರತ್ಯೂಷಾ ಹರಾಜಿನ ದುಬಾರಿ ಆಟಗಾರ್ತಿ ಎನಿಸಿದರು. 2023ರಲ್ಲಿ ಚೊಚ್ಚಲ ಟೆಸ್ಟ್ ಆಡಿದ ಶುಭಾ ಸತೀಶ್ ಮತ್ತೆ ಮೈಸೂರು ತಂಡಕ್ಕೆ ಮರಳಿದರು. ಹುಬ್ಬಳ್ಳಿ ಟೈಗರ್ಸ್ ಸೇರಿರುವ ವೃಂದಾ ದಿನೇಶ್ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರಿಮೀಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಯುಪಿ ವಾರಿಯರ್ಸ್ ತಂಡ ಪ್ರತಿನಿಧಿಸಿದ್ದಾರೆ.
ಇತರ ದುಬಾರಿ ಖರೀದಿ: ಶಿಶಿರ ಎ ಗೌಡ (₹4.10 ಲಕ್ಷ), ಸಹಾನ ಎಸ್ ಪವಾರ್ (₹2.80 ಲಕ್ಷ) ಮೈಸೂರು ವಾರಿಯರ್ಸ್ ಸೇರಿದರೆ, ಭಾರತ ತಂಡದ ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ (₹3.30 ಲಕ್ಷ), ವಿಕೆಟ್ ಕೀಪರ್-ಬ್ಯಾಟರ್ ಶ್ರೇಯಾ ಚೌಹಾಣ್ (₹3.20 ಲಕ್ಷ) ಗುಲ್ಬರ್ಗ ಮಿಸ್ಟಿಕ್ಸ್ ಸೇರ್ಪಡೆಯಾದರು. 19 ವಯೋಮಿತಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ನಿಕಿ ಪ್ರಸಾದ್ (₹4.10 ಲಕ್ಷ), ಆರ್‌ಸಿಬಿ ಮಹಿಳಾ ತಂಡದ ಪ್ರತ್ಯೂಷಾ ಕೆ. (₹2.30 ಲಕ್ಷ) ಹುಬ್ಬಳ್ಳಿ ಟೈಗರ್ಸ್ ಹಾಗೂ ಆಲ್ರೌಂಡರ್ ಮಿಥಿಲಾ ವಿನೋದ್ (₹1.90 ಲಕ್ಷ), ಚಂದಸಿ ಕೆ (₹2 ಲಕ್ಷ) ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಸೇರಿದರು.
ಎರಡನೇ ಆವೃತ್ತಿಯ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 ಜುಲೈ 22ರಿಂದ ಆಗಸ್ಟ್ 2ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಭಾಗವಹಿಸಲಿವೆ.