ಟೀಮ್ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ( Sanju Samson )
- ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಫೈನಲ್ ತಲುಪಿದೆ
- ಮತ್ತೊಮ್ಮೆ ಸಂಜು ಸ್ಯಾಮ್ಸನ್ ಭಾರತೀಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು
- ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಂಜು ಎಲ್ಲರ ಮೆಚ್ಚುಗೆಗೆ ಪಾತ್ರರಾದರು
- ಇದೇ ಸಮಯದಲ್ಲಿ ಪುಟ್ಟ ಹುಡುಗಿಯೊಬ್ಬಳು ಕೂಡ ಎಲ್ಲರ ಗಮನ ಸೆಳೆದಿದ್ದಾಳೆ
Sanju Samson : ಟಿ20 ವಿಶ್ವಕಪ್-2026ರಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಫೈನಲ್ ತಲುಪಿದೆ. ಮತ್ತೊಮ್ಮೆ ಸಂಜು ಸ್ಯಾಮ್ಸನ್ ( 42 ಎಸೆತದಲ್ಲಿ 89 ರನ್) ಭಾರತೀಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ, ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ, ಸಂಜು ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ಸಮಯದಲ್ಲಿ ಪುಟ್ಟ ಹುಡುಗಿಯೊಬ್ಬಳು ಕೂಡ ಎಲ್ಲರ ಗಮನ ಸೆಳೆದಿದ್ದಾಳೆ.
ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟಿ20 ಸ್ವರೂಪದಲ್ಲಿ ಅಪಾಯಕಾರಿ ತಂಡವೆಂದು ಕರೆಯಲ್ಪಡುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇರಳದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಮ್ಮ ತಂಡದ ಸದಸ್ಯರು ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಪರೇಡ್ ಮಾಡಿದರು ಕೂಡ ಸಂಜು ಮಾತ್ರ ಆತ್ಮವಿಶ್ವಾಸದಿಂದ ಸ್ಥಿರವಾಗಿ ಬ್ಯಾಟಿಂಗ್ ಮಾಡಿದರು. ನಿರ್ಣಾಯಕ ಪಂದ್ಯದಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದು ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸಂಜು ಅವರ ಅದ್ಭುತ ಇನ್ನಿಂಗ್ಸ್ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಲು ಸಹಾಯ ಮಾಡಿತು.
ಅಂದಹಾಗೆ, ಸಂಜು ಕಳೆದ ಕೆಲವು ದಿನಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಅವರು ಆರಂಭಿಕ ಆಟಗಾರನ ಸ್ಥಾನವನ್ನು ಕಳೆದುಕೊಂಡಿದ್ದರು. ಆದಾಗ್ಯೂ, ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಂತಿಮವಾಗಿ ತಂಡಕ್ಕೆ ಮರಳಿದ್ದ ಸಂಜು, ವೆಸ್ಟ್ ಇಂಡೀಸ್ ವಿರುದ್ಧ ಪ್ರಭಾವ ಬೀರುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಸ್ಮರಣೀಯ ಇನ್ನಿಂಗ್ಸ್ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದರು.
ಇಂಗ್ಲೆಂಡ್ ವಿರುದ್ಧವೂ ಮುಂದುವರಿದ ಫಾರ್ಮ್
ವಿಂಡೀಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಂಜು ಇಂಗ್ಲೆಂಡ್ ವಿರುದ್ಧವೂ ತಮ್ಮ ಫಾರ್ಮ್ ಮುಂದುವರಿಸಿದರು. ನಿನ್ನೆ (ಮಾರ್ಚ್ 5) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ರನ್ ಆಗಿದ್ದಾಗ ಅಭಿಷೇಕ್ ಶರ್ಮಾ (8 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಮತ್ತೊಂದು ಬ್ಯಾಟಿಂಗ್ ಮಾಡುತ್ತಿದ್ದ ಸಂಜು, ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಸಂಜು 7 ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ 89 ರನ್ ಗಳಿಸಿ ಔಟಾದರು. ಸಂಜು ಹಾಕಿಕೊಟ್ಟ ಭದ್ರ ಅಡಿಪಾಯದಿಂದಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 253 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾಯಿತು. ಇದರಿಂದ ಟೀಮ್ ಇಂಡಿಯಾ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿತು.
ಫಲಿಸಿತು ಪುಟ್ಟ ಹುಡುಗಿಯ ಪ್ರಾರ್ಥನೆ
ನಿನ್ನೆಯ ಪಂದ್ಯದಲ್ಲಿ ಸಂಜುವಿನಷ್ಟೇ ಗಮನವನ್ನು ಪುಟ್ಟು ಹುಡುಗಿ ಸೆಳೆದಿದ್ದಾಳೆ. ಪಂದ್ಯ ಆರಂಭಕ್ಕೂ ಮುನ್ನ ಆಯಾ ತಂಡಗಳ ರಾಷ್ಟ್ರಗೀತೆ ಆಡಿಸುವುದು ಸಂಪ್ರದಾಯ. ನಿನ್ನೆಯ ಪಂದ್ಯದಲ್ಲಿ ಮೊದಲು ಇಂಗ್ಲೆಂಡ್ ರಾಷ್ಟ್ರಗೀತೆ ಮೊಳಗಿತು. ಇದಾದ ಬಳಿಕ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ವೇಳೆ ಪ್ರತಿಯೊಬ್ಬ ಆಟಗಾರರ ಮುಂದೆ ಒಬ್ಬೊಬ್ಬರು ಮಕ್ಕಳು ನಿಂತಿದ್ದರು. ಎಲ್ಲರು ರಾಷ್ಟ್ರಗೀತೆ ಹಾಡುವಾಗ ಎದೆಯುಬ್ಬಿಸಿ ನಿಂತಿದ್ದರು. ಆದರೆ, ಸಂಜು ಮುಂದೆ ನಿಂತಿದ್ದ ಓರ್ವ ಪುಟ್ಟ ಬಾಲಕಿ, ರಾಷ್ಟ್ರಗೀತೆ ಹಾಡುವಾಗ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಕಾಕತಾಳೀಯ ಎಂಬಂತೆ ಆ ಪ್ರಾರ್ಥನೆ ನಿನ್ನೆ ಸಂಜು ಪಾಲಿಗೆ ಫಲಿಸಿದೆ.
ಕ್ಯಾಚ್ ಡ್ರಾಪ್
ಹೌದು, ನಿನ್ನೆ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಂಜುಗೆ ಒಂದು ಜೀವದಾನ ದೊರೆಯಿತು. ಸಂಜು 24 ರನ್ ಗಳಿದ್ದಾಗ, ಜೋಫ್ರಾ ಆರ್ಚರ್ ಓವರ್ನಲ್ಲಿ ಲಾಂಗ್ ಆನ್ ಅನ್ನು ಟಾರ್ಗೆಟ್ ಮಾಡಿ, ಬಲವಾಗಿ ಹೊಡೆದರು. ಈ ವೇಳೆ ಚೆಂಡು 38 ಸರ್ಕಲ್ ಒಳಗೆ ನಿಂತಿದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕೈಗೆ ಹೋಯಿತು. ಆದರೆ, ಸುಲಭವಾಗಿ ಹಿಡಿಯಬಹುದಾದ ಕ್ಯಾಚ್ ಅನ್ನು ಬ್ರೂಕ್ ಕೈ ಚೆಲ್ಲಿದ್ದರು. ಅದೇ ಓವರ್ನಲ್ಲಿ ಸಂಜು ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಅಲ್ಲದೆ, ಅಲ್ಲಿಂದಾಚೆಗೆ ಸಂಜು ಅಬ್ಬರಿಸಿ, ಬೊಬ್ಬಿರಿದರು. ಅಂತಿಮವಾಗಿ 42 ಎಸೆಗಳಲ್ಲಿ 89 ರನ್ ಗಳಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿ ಔಟಾದರು. ಇದಾದ ಬಳಿಕ, ಪುಟ್ಟ ಹುಡುಗಿ ಪ್ರಾರ್ಥನೆ ಸಲ್ಲಿಸುವತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಆ ಹುಡುಗಿಯ ಪ್ರಾರ್ಥನೆ ನಿನ್ನೆ ಸಂಜು ಪರವಾಗಿ ಕೆಲಸ ಮಾಡಿದೆ ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.