- ಗುವಾಹಟಿಯಲ್ಲಿ ಸಿಎಸ್ಕೆ ಮತ್ತು ಆರ್ಆರ್ ನಡುವೆ ಮೂರನೇ ಐಪಿಎಲ್ ಪಂದ್ಯ
- ಮೊದಲ ಬ್ಯಾಟ್ ಮಾಡಿದ ಸಿಎಸ್ಕೆ ಬ್ಯಾಟರ್ಗಳ ಬೆವರಿಳಿಸಿದ ಆರ್ಆರ್ ಬೌಲರ್ಗಳು
- ಮೊದಲ ಇನ್ನಿಂಗ್ಸ್ ಮುಕ್ತಾಯ, ರಾಜಸ್ಥಾನ ಪಡೆಗೆ ರನ್ಗಳ ಗುರಿ
CSK vs RR: ಇಂದು (ಮಾ.30) ಅಸ್ಸಾಂನ ಗುವಾಹಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 19ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಮೂವರು 6 ರನ್ಗೆ ಔಟ್
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ಆರ್, ರುತುರಾಜ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್ ಮಾಡಿದ ಸಿಎಸ್ಕೆಗೆ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಸಾಥ್ ನೀಡಲಿಲ್ಲ. ಆರಂಭಿಕರಾದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ (6 ರನ್) ಮತ್ತು ಸಂಜು ಸ್ಯಾಮ್ಸನ್ (6) ಒಂದಂಕಿಗೆ ಬಹುಬೇಗನೇ ಪೆವಿಲಿಯನ್ ಹಾದಿಹಿಡಿದರು.
ಕಳಪೆ ಬ್ಯಾಟಿಂಗ್ ಪ್ರದರ್ಶನ
ಅವರ ಹಾದಿಯನ್ನೇ ಹಿಡಿದ ಆಯುಷ್ ಮಾತ್ರೆ (0), ಮ್ಯಾಟ್ ಶಾರ್ಟ್ (2) ಮತ್ತು ಶಿವಂ ದುಬೆ (6) ಅವರಿಂದಲೂ ಉತ್ತಮ ಇನ್ನಿಂಗ್ಸ್ ಬರಲಿಲ್ಲ. ಇನ್ನು ಅಪಾರ ನಿರೀಕ್ಷೆಯಿಂದ ಹರಾಜಿನಲ್ಲಿ ಖರೀದಿ ಮಾಡಿದ್ದ ಸರ್ಫರಾಜ್ ಖಾನ್ (17), ಸ್ಫೋಟಕ ಶುರು ನೀಡಿದ್ದೇ ಆದರೂ ಮುಂದುವರಿಸುವಲ್ಲಿ ಮುಗ್ಗರಿಸಿದರು. ಈ ಮಧ್ಯೆ, ಜೆಮೀ ಓವರ್ಟರ್ನ್ (30) ಅವರ ಏಕಾಂಗಿ ಹೋರಾಟದಿಂದ ತಕ್ಕಮಟ್ಟಿಗಿನ ಪ್ರದರ್ಶನ ಮೂಡಿಬಂದಿದ್ದು, ತಂಡದ ಮೊತ್ತ 100ರ ಗಡಿದಾಟಿತು.
ಸೇಡು ತೀರಿಸಿಕೊಂಡ ಜಡೇಜಾ
ಚೆನ್ನೈ ಬ್ಯಾಟರ್ಗಳನ್ನು ಆರಂಭದಿಂದಲೇ ಕಟ್ಟುಹಾಕಿದ ರಾಜಸ್ಥಾನ ರಾಯಲ್ಸ್ ಪಡೆಯ ಬೌಲರ್ಗಳು, ಬಹುಮುಖ್ಯ ವಿಕೆಟ್ಗಳನ್ನೇ ಕಬಳಿಸಿದರು. ಇನ್ನು ಎಷ್ಟೋ ವರ್ಷಗಳಿಂದ ಸಿಎಸ್ಕೆಗೆ ಆಡಿದ್ದ ಜಡೇಜಾರನ್ನು ಸಂಜು ಸ್ಯಾಮ್ಸನ್ ಅವರಿಗೋಸ್ಕರ ಟ್ರೇಡ್ ಮಾಡಿದ ಫ್ರಾಂಚೈಸಿಗೆ ಮೊದಲ ಪಂದ್ಯದಲ್ಲೇ ಜಡೇಜಾ ತಪ್ಪಿನ ಅರಿವು ಮೂಡಿಸಿದ್ದು ವಿಶೇಷ.
ಕೇವಲ ಒಂದೇ ಓವರ್ನಲ್ಲಿ ಇಬ್ಬರ ವಿಕೆಟ್ ಪಡೆದ ಜಡೇಜಾ, ಮೊದಲ ಇನ್ನಿಂಗ್ಸ್ನಲ್ಲೇ ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಸಿಎಸ್ಕೆಗೆ ಪರೋಕ್ಷ ಎಚ್ಚರಿಕೆ ನೀಡಿದರು. ಜೋಫ್ರಾ ಆರ್ಚರ್, ನಂದ್ರೆ ಬರ್ಗರ್ ತಲಾ ಎರಡು, ಬ್ರಿಜೇಶ್ ಶರ್ಮ ಮತ್ತು ಸಂದೀಪ್ ಶರ್ಮ, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ಗಳನ್ನು ಪಡೆಯುವ ಮೂಲಕ ತಂಡದ ಪರ ಮಿಂಚಿದರು. 19.4 ಓವರ್ಗೆ ಆಲ್ಔಟ್ ಆದ ಸಿಎಸ್ಕೆ, ಕೇವಲ 127 ರನ್ ಕಲೆಹಾಕಲಷ್ಟೇ ಶಕ್ತವಾಯಿತು.