CSK vs RCB: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್ 19ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಆರ್ಸಿಬಿ ಒನ್ ಸೈಡೆಡ್ ಆಗಿ 43 ರನ್ಗಳ ಅಂತರದಲ್ಲಿ ಜಯ ಸಾಧಿಸಿತು.
ಟಾಸ್ ಗೆದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್, ಆರ್ಸಿಬಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಅಂತೆಯೇ, ಕಣಕ್ಕಿಳಿದ ಚಾಲೆಂಜರ್ಸ್ ಪಡೆಯ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಪವರ್ಪ್ಲೇಯಲ್ಲಿ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲರಾದರು. ಕೇವಲ 28 ರನ್ಗೆ ಕೊಹ್ಲಿ ಔಟಾದರೆ, ಸಾಲ್ಟ್ 46 ರನ್ಗಳನ್ನು ಸಿಡಿಸಿ ಪೆವಿಲಿಯನ್ಗೆ ಹಿಂತಿರುಗಿದರು. ಅವರ ನಂತರದಲ್ಲಿ ಬಂದ ದೇವದತ್ತ ಪಡಿಕಲ್, ರಜತ್ ಪಾಟಿದಾರ್ ಮತ್ತು ಟಿಮ್ ಡೇವಿಡ್ರ ಸ್ಫೋಟಕ ಇನ್ನಿಂಗ್ಸ್ ತಂಡದ ಮೊತ್ತವನ್ನು 250ರ ಗಡಿದಾಟಿಸಿತು.
ಆರ್ಸಿಬಿ ನೀಡಿದ 251 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಎಂದಿನಂತೆ ಆರಂಭಿಕರು ಆರಂಭಿಕ ಹಂತದಲ್ಲೇ ಕೈಕೊಟ್ಟರು. ನಾಯಕ ರುತುರಾಜ್ ಗಾಯಕ್ವಾಡ್ (7 ರನ್) ಮತ್ತು ಸಂಜು ಸ್ಯಾಮ್ಸನ್ (9) ಕೇವಲ ಒಂದಂಕಿಗೆ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ಆಯುಷ್ ಮಾತ್ರೆ (1) ಕೂಡ ಔಟ್ ಆದರು. ಇನ್ನು ತಂಡದ ಮೊತ್ತವನ್ನು 100 ಗಡಿದಾಟಿಸಲು ಕೊಡುಗೆ ನೀಡಿದ್ದು ಸರ್ಫರಾಜ್ ಖಾನ್ (50), ಪ್ರಶಾಂತ್ ವೀರ್ (43) ಮತ್ತು ಜೆಮೀ ಓವರ್ಟನ್ (37) ಮಾತ್ರ.
ಪಡಿಕಲ್, ರಜತ್, ಡೇವಿಡ್ ಅಬ್ಬರ
10 ಓವರ್ವರೆಗೆ 90 ರನ್ಗಳನ್ನು ಹೊಂದಿದ್ದ ಆರ್ಸಿಬಿಗೆ ಬಲ ತುಂಬಿದ್ದೇ ದೇವದತ್ತ ಪಡಿಕಲ್ ಅವರ ಆಕರ್ಷಕ ಅರ್ಧಶತಕ. ಪಡಿಕಲ್ಗೆ ಸಾಥ್ ನೀಡಿದ ಕ್ಯಾಪ್ಟನ್ ರಜತ್ ಪಾಟೀದಾರ್ ಕೂಡ ಕಡಿಮೆ ಎಸೆತಗಳಲ್ಲಿ ಸ್ಫೋಟಕ ಸಿಕ್ಸರ್, ಬೌಂಡರಿಗಳನ್ನು ಬಾರಿಸಿದರು. ಇವರಿಬ್ಬರ ಹಾದಿಯನ್ನೇ ಹಿಡಿದ ದೈತ್ಯ ಟಿಮ್ ಡೇವಿಡ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳನ್ನು ಸಿಡಿಸಿದರು. ಇದು ಮತ್ತೊಮ್ಮೆ ಚೆನ್ನೈ ಪಡೆಯ ಬೌಲರ್ಗಳ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿತು.
ಮತ್ತದೇ ತಪ್ಪು
ಮೊದಲೆರೆಡು ಪಂದ್ಯಗಳಲ್ಲಿಯೂ ಪವರ್ಪ್ಲೇಯಲ್ಲಿ ವಿಕೆಟ್ ಪಡೆಯಲು ಪರದಾಡಿದ ಸಿಎಸ್ಕೆ ಬೌಲರ್ಗಳು, ರಜತ್ ಪಡೆಯ ವಿರುದ್ಧವೂ ವಿಕೆಟ್ ಕೀಳಲು ತೀರ ಹೆಣಗಾಡಿದರು. ಚೆನ್ನೈ ಬೌಲರ್ಗಳಿಗೆ ನೀರು ಕುಡಿಸಿದ ಆರ್ಸಿಬಿ, 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಸಿಎಸ್ಕೆ, ಸತತವಾಗಿ ಮೂರು ಸೋಲುಗಳನ್ನು ಉಂಡಿದೆ.