ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ
- ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಹೀನಾಯ ಸೋಲು
- ಚೆನ್ನೈ ಸೂಪರ್ ಕಿಂಗ್ಸ್‌ಗೆ 8 ವಿಕೆಟ್‌ಗಳ ಸುಲಭ ಗೆಲುವು
- ಪ್ಲೇಆಫ್ ರೇಸ್ನಿಂದ ದೂರ ಸರಿದ ಹಾರ್ದಿಕ್ ಪಾಂಡ್ಯ ಪಡೆ
CSK vs MI: ನಿನ್ನೆ (ಮೇ.02) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಪಡೆ 8 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್‌ಗೆ ಈ ಸೋಲಿನಿಂದ ಪ್ಲೇಆಫ್ ಕನಸು ಬಹುತೇಕ ಛಿದ್ರಗೊಂಡಿದೆ.
ಈ ಲೀಗ್ನಲ್ಲಿ ಉಳಿದಿರುವ ಐದಕ್ಕೂ ಐದೂ ಪಂದ್ಯಗಳನ್ನು ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್‌ಗೆ ಪ್ಲೇಆಫ್ ಎಂಟ್ರಿಗೆ ಸಾಧ್ಯತೆಗಳಿವೆ. ಅದರಲ್ಲೂ, ಹೆಚ್ಚಿನ ರನ್ರೇಟ್ನೊಂದಿಗೆ ಅಥವಾ ಪಾಯಿಂಟ್ಗಳಿಂದ ಏನಾದರೂ ಜಯ ಸಾಧಿಸಿದರೆ, ಅಂಕಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಖಚಿತವಾಗಲಿದೆ. ಈ ಮಧ್ಯೆ, ಚೆನ್ನೈ ವಿರುದ್ಧ ಗೆಲ್ಲಲೇಬೇಕಾದ ಮ್ಯಾಚ್ನಲ್ಲಿಯೂ ಮತ್ತದೇ ಸೋಲಿನ ಹಾದಿ ಹಿಡಿದ ಹಾರ್ದಿಕ್ ಪಾಂಡ್ಯ ಕಡೆಗೂ ತಮ್ಮ ಸೋಲಿಗೆ ಕಾರಣವೇನು? ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಈ ಪಿಚ್‌ನಲ್ಲಿ 180ರಿಂದ 190 ರನ್‌ಗಳು ಉತ್ತಮ ಸ್ಕೋರ್ ಆಗಿದೆ. ಒಂದು ಹಂತದಲ್ಲಿ ನಾವು ಸುಲಭವಾಗಿ ಈ ಸ್ಕೋರ್ ಗಳಿಸಬಹುದು ಎಂದುಕೊಂಡಿದ್ದೆ. ಆದರೆ, 10 ಓವರ್‌ಗಳ ನಂತರ, ನಮ್ಮ ಬ್ಯಾಟಿಂಗ್ ಆಕ್ರಮಣಕಾರಿಯಾಗಿ ಮುಂದುವರಿಯಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ನಮ್ಮ ಬ್ಯಾಟರ್ಗಳಿಂದ ಸಂಪೂರ್ಣವಾಗಿ ವಿಫಲರಾದೆವು. ಬೌಲಿಂಗ್ ವಿಭಾಗದಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದರು.
ನಮ್ಮ ಬೌಲರ್ಗಳು ಸಿಎಸ್‌ಕೆ ಬ್ಯಾಟರ್‌ಗಳನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸಿದರು. ಆದರೆ, ಅವರು ಚುರುಕಾಗಿ ಬ್ಯಾಟಿಂಗ್ ಮಾಡಿದರು. ವಾಸ್ತವವಾಗಿ, ನೀವು ಕ್ರೀಸ್‌ಗೆ ಬಂದಾಗ ಈ ಪಿಚ್‌ನಲ್ಲಿ ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಲ್ಲ. ಲೆಕ್ಕಾಚಾರದ ಕ್ರಿಕೆಟ್ ಆಡುವುದು ಮತ್ತು ವಿಕೆಟ್‌ಗಳನ್ನು ಪಡೆಯುವುದು ಇಲ್ಲಿ ಪ್ರಮುಖವಾಗಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಗ್ಗರಿಸಿದೆವು. ಈ ಪಂದ್ಯದಲ್ಲಿ ಚೆನ್ನೈ ಮೂರು ವಿಭಾಗಗಳಲ್ಲಿ ನಮಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡಿತು ಎಂದು ಹಾರ್ದಿಕ್ ಹೇಳಿದರು.
ಪಂದ್ಯದ ವಿವರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 159 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಆರಂಭಿಕರಾದ ಸಂಜು ಸ್ಯಾಮ್ಸನ್ರಿಂದ ಉತ್ತಮ ಇನ್ನಿಂಗ್ಸ್ ಬರಲಿಲ್ಲ. ಅವರ ಬೆನ್ನಲ್ಲೇ ಮತ್ತೊಂದು ವಿಕೆಟ್ ಹೋಗುತ್ತಿದ್ದಂತೆ ಚೆನ್ನೈ ಪಡೆಗೆ ಸೋಲೇ ಗತಿ ಎನ್ನಲಾಯಿತು. ಹೀಗಿರುವಾಗ, ಕ್ರೀಸ್‌ಗೆ ಅಂಟಿ ನಿಂತ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ (ಅಜೇಯ 67 ರನ್) ಮತ್ತು ಕಾರ್ತಿಕ್ ಶರ್ಮ (ಅಜೇಯ 54) ಉತ್ತಮ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. 11 ಬಾಲ್ ಉಳಿದಿರುವಂತೆ ಪಂದ್ಯವನ್ನು ಮುಗಿಸಿದರು,(ಏಜೆನ್ಸೀಸ್).