ಸ್ಟಬ್ಸ್ ವಿಚಾರಕ್ಕೆ ಅಂಪೈರ್ ಜೊತೆಗೆ ನಿತೀಶ್ ರಾಣಾ ಜಗಳ
- ಸಿಎಸ್ಕೆ ಎದುರು ಡೆಲ್ಲಿ ಕ್ಯಾಪಿಟಲ್ಸ್ಗೆ 23 ರನ್ಗಳ ಹೀನಾಯ ಸೋಲು
- ಈ ಪಂದ್ಯದಲ್ಲಿ ಅಂಪೈರ್ ಮಾಡಿದ ತಪ್ಪಿನಿಂದಲೇ ಡೆಲ್ಲಿಗೆ ಸೋಲು?
- ನಾಲ್ಕನೇ ಅಂಪೈರ್ಗೆ ಬೌಂಡರಿ ಲೈನ್ನಲ್ಲೇ ಚಳಿ ಬಿಡಿಸಿದ ನಿತೀಶ್ ರಾಣಾ
CSK vs DC: ನಿನ್ನೆ (ಏ.11) ನಡೆದ ಐಪಿಎಲ್ 19ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿತು. ಕೊನೆಯ ಓವರ್ವರೆಗೂ ತಲುಪದ ಈ ಮ್ಯಾಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಯಾರೊಬ್ಬರು ಉತ್ತಮ ಇನ್ನಿಂಗ್ಸ್ ನೀಡಲಿಲ್ಲ. ಆರಂಭಿಕ ಬ್ಯಾಟರ್ ನಿಸ್ಸಂಕಾ (41) ಮತ್ತು ಸ್ಟಬ್ಸ್ (60) ಅವರನ್ನು ಹೊರತುಪಡಿಸಿದರೆ, ಇನ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೊಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ಆದರೆ, ಗೆಲುವಿಗೆ ಹತ್ತಿರದಲ್ಲಿದ್ದ ಡೆಲ್ಲಿ ಪಡೆಗೆ ಬೌಂಡರಿ ಲೈನ್ನಲ್ಲಿದ್ದ ಅಂಪೈರ್ ಮಾಡಿದ ತಪ್ಪಿನಿಂದಲೇ ಸೋಲಾಯಿತು ಎಂಬ ಆರೋಪಗಳು ಕೇಳಿಬಂದಿವೆ.
ಈ ಪಂದ್ಯದ ಸಮಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ, ಅಂತಿಮ ತಂಡದಲ್ಲಿಲ್ಲದಿದ್ದರೂ, ಸ್ಟಬ್ಸ್ ಅವರ ವಿಚಾರಕ್ಕೆ ನಾಲ್ಕನೇ ಅಂಪೈರ್ ಜೊತೆ ಜೋರು ವಾಗ್ವಾದಕ್ಕಿಳಿದದ್ದು ಹಲವರ ಗೊಂದಲಕ್ಕೆ ಕಾರಣವಾಯಿತು. ಅಸಲಿಗೆ ಸಿಕ್ಸರ್, ಬೌಂಡರಿಗಳನ್ನು ಬಾರಿಸುತ್ತಿದ್ದ ಸ್ಟಬ್ಸ್, ಸಿಎಸ್ಕೆಗೆ ಭಾರೀ ಡೇಂಜರೆಸ್ ಆಗಿ ಕಾಣುತ್ತಿದ್ದರು. ಆದರೆ, ಗೆಲುವಿಗೆ ಹತ್ತಿದಲ್ಲಿದ್ದ ಸಮಯದಲ್ಲಿ, ಅವರಿಗೆ ಗ್ಲೌಸ್ ವಿಪರೀತ ಜಾರುತ್ತಿತ್ತು. ಇದರಿಂದ ಅವರ ಆಟಕ್ಕೆ ಅಡಚಣೆಯಾಗುತ್ತಿತ್ತು. ಹೀಗಾಗಿ, ಬೇರೆ ಗ್ಲೌಸ್ ಧರಿಸಲು ಅವಕಾಶ ಕೋರಿದರು. ಆದರೆ, ಅಂಪೈರ್ ಮಾತ್ರ ಇದಕ್ಕೆ ಓಕೆ ಎಂದು ಹೇಳಲಿಲ್ಲ. ಕಾರಣ, ಸಮಯದ ಅಭಾವ.
19ನೇ ಓವರ್‌ನ ಎರಡನೇ ಎಸೆತದ ನಂತರ ಸ್ಟಬ್ಸ್ ತಮ್ಮ ಗ್ಲೌಸ್‌ಗಳನ್ನು ಬದಲಾಯಿಸಲು ಅಂಪೈರ್ ಅನುಮತಿ ಪಡೆಯಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಓಕೆ ಎನ್ನದ ನಾಲ್ಕನೇ ಅಂಪೈರ್, ಈಗ ಸಮಯವಿಲ್ಲ. ಮತ್ತು ಗ್ಲೌಸ್‌ಗಳನ್ನು ಬದಲಾಯಿಸಲು ಅನುಮತಿ ಸಿಗೋದಿಲ್ಲ ಎಂದರು. ಈ ನಡೆಗೆ ಸಿಡಿಮಿಡಿಗೊಂಡ ನಿತೀಶ್, ಡಗೌಟ್‌ನಲ್ಲಿ ಕುಳಿತಿದ್ದವರು ಏಕಾಏಕಿ ವಾಗ್ವಾದಕ್ಕಿಳಿದರು. ನೀವು ಆನ್ಫೀಲ್ಡ್ ಅಂಪೈರ್ ಬಳಿ ಹೋಗಿ ಗ್ಲೌಸ್‌ಗಳನ್ನು ಬದಲಾಯಿಸಲು ಹೇಳಿ, ನಿಯಮಗಳ ಪ್ರಕಾರ ನೀವು ಗ್ಲೌಸ್‌ಗಳನ್ನು ಬದಲಾಯಿಸಲು ಸಾಧ್ಯವಿಲ್ಲವೇ? ಎಂದು ಕಿಡಿಕಾರಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಡೆಗೂ ಗ್ಲೌಸ್‌ಗಳನ್ನು ಬದಲಾಯಿಸಲು ಅವಕಾಶ ಕೊಡದ ಕಾರಣ, ಮುಂದಿನ ಚೆಂಡನ್ನು ಎದುರಿಸಿದ ಸ್ಟಬ್ಸ್ ನೇರವಾಗಿ ಬ್ರೆವಿಸ್ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆದರು. ಅಂಪೈರ್ ಮೇಲಿನ ಕೋಪದಿಂದ ಸ್ಟಬ್ಸ್, ಬ್ಯಾಟ್ ಮತ್ತು ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದು, ಡ್ರೆಸ್ಸಿಂಗ್ ರೂಮ್ಗೆ ನಡೆದುಹೋದ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಬಿಸಿಸಿಐ ಏನು ಹೇಳಲಿದೆ? ಎಂಬುದನ್ನು ಕಾದು ನೋಡಬೇಕಿದೆ.
ಬಿಸಿಸಿಐ ಗರಂ
ಟ್ರಿಸ್ಟಾನ್ ಸ್ಟಬ್ಸ್‌ಗೆ ತಮ್ಮ ಗ್ಲೌಸ್ ಬದಲಾಯಿಸಲು ಅವಕಾಶ ನಿರಾಕರಿಸಿದ ಕಾರಣಕ್ಕೆ ಅಂಪೈರ್ ಜೊತೆಗೆ ಕೂಗಾಡಿದ ನಿತೀಶ್ ರಾಣಾ ನಡೆಗೆ ಇದೀಗ ಬಿಸಿಸಿಐ ಗರಂ ಆಗಿದೆ. ಈ ನಿಟ್ಟಿನಲ್ಲಿ, ದಂಡವನ್ನೂ ವಿಧಿಸಿದೆ. ಅವರ ಪಂದ್ಯ ಶುಲ್ಕದ ಶೇ.25ರಷ್ಟು ಕಡಿತಗೊಳಿಸುವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಿದೆ,(ಏಜೆನ್ಸೀಸ್).