- ಐಪಿಎಲ್ 19ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ
- 5 ಬಾರಿ ಚಾಂಪಿಯನ್ಸ್ ಪಟ್ಟ ಪಡೆದ ತಂಡದಿಂದ ಈ ಮಟ್ಟಿಗಿನ ಕಳಪೆಯಾಟ
- ಧೋನಿ, ಎಲ್ಲಿಸ್, ಖಲೀಲ್ ಅಲಭ್ಯತೆಯ ಬೆನ್ನಲ್ಲೇ ತಂಡಕ್ಕೆ ಬಿಗ್ ಶಾಕ್
- ಟೂರ್ನಿಯಿಂದಲೇ ಆಯುಷ್ ಮಾತ್ರೆ ಹೊರಗೆ
CSK: ಈ ವರ್ಷ ಐದು ಬಾರಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ಗೆ ಅದೃಷ್ಟ ಬೆನ್ನತ್ತಿದ್ದಂತೆ ಕಾಣುತ್ತಿದೆ. ಐಪಿಎಲ್ 19ನೇ ಆವೃತ್ತಿಯಲ್ಲಿ ಅದೇನಾಯಿತೋ, ಏನೋ ಗೊತ್ತಿಲ್ಲ. ಈ ಫ್ರಾಂಚೈಸಿ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಅದಕ್ಕೆ ಸ್ಟಾರ್ ಆಟಗಾರರ ಅಲಭ್ಯತೆ, ಕಳಪೆ ಪ್ರದರ್ಶನ, ಕೊಟ್ಟ ಅವಕಾಶಗಳನ್ನು ಉಪಯೋಗಿಸಿಕೊಳ್ಳದ ಪ್ಲೇಯರ್ಗಳು ಹೀಗೆ ಹಲವು ಕಾರಣಗಳು ತಂಡವನ್ನು ಸೋಲಿನ ಹಾದಿಗೆ ನೂಕಿದೆ. ಎಷ್ಟೇ ಪ್ರಯತ್ನಿಸಿದರೂ, ಪುಟಿದೇಳುವ ಯಾವ ಲಕ್ಷಣಗಳು ಕಾಣದಿರುವುದು ಫ್ರಾಂಚೈಸಿಯ ಅಭಿಮಾನಿಗಳಿಗೆ ಬೇಸರದ ಸಂಗತಿ.
ಈ ಸೀಸನ್ ಆರಂಭದಿಂದಲೂ ಕಳಪೆ ಪ್ರದರ್ಶನ ಮುಂದುವರಿಸಿರುವ ಸಿಎಸ್‌ಕೆ, 200 ರನ್ಗಳ ಟಾರ್ಗೆಟ್ ನೀಡಿದರೂ ಸಹ ಸೋಲಿನಿಂದ ಬಚಾವ್ ಆಗಲು ಆಗುತ್ತಿಲ್ಲ. ಮತ್ತೊಂದೆಡೆ, ತಂಡದಲ್ಲಿ ಸ್ಟಾರ್ ಆಟಗಾರರ ಇಂಜುರಿಯಿಂದ ನಿರೀಕ್ಷಿತ ಗೆಲುವು ನೋಡಲು ಸಾಧ್ಯವಾಗುತ್ತಿಲ್ಲ. ಕಳಪೆ ಪ್ರದರ್ಶನ ಮತ್ತು ಸರಣಿ ಸೋಲಿನ ಬೆನ್ನಲ್ಲೇ ತಂಡಕ್ಕೆ ಮತ್ತೊಬ್ಬ ಆಟಗಾರನ ಅಲಭ್ಯತೆ ಕಾಡಿದೆ. ಅದುವೇ, ಯುವ ಸ್ಟಾರ್ ಬ್ಯಾಟರ್ ಆಯುಷ್ ಮಾತ್ರೆ.
ಈ ಸೀಸನ್ ಆರಂಭದಿಂದಲೂ ತಂಡದ ಪರ ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿರುವುದು ಎಂದರೆ, ಅದು ಆಯುಷ್ ಮತ್ತು ಸರ್ಫರಾಜ್ ಖಾನ್ ಮಾತ್ರ. ಇವರಿಬ್ಬರ ಪ್ರದರ್ಶನ ಬಿಟ್ಟರೆ ಉಳಿದ ಬ್ಯಾಟರ್ಗಳು ಪದೇ ಪದೇ ಅಭಿಮಾನಿಗಳ ನಿರೀಕ್ಷೆ, ಆಸೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ. ಮೊದಲೇ ತಂಡದ ಬೆನ್ನೆಲುಬಾದ ಮಹೇಂದ್ರ ಸಿಂಗ್ ಧೋನಿ, ನಾಥನ್ ಎಲ್ಲಿಸ್ ಮತ್ತು ವೇಗಿ ಖಲೀಲ್ ಅಹ್ಮದ್ ಇಂಜುರಿ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಇವರ ಅಲಭ್ಯತೆಯೇ ನಡುವೆ ಈಗ ಮಾತ್ರೆ ಸಮಸ್ಯೆ ತಂಡವನ್ನು ದೊಡ್ಡ ಸಂಕಷ್ಟಕ್ಕೆ ದೂಡಿದೆ.
ಸಿಎಸ್‌ಕೆ ಗೆಲುವಿನ ಹಾದಿಗೆ ಮರಳಲು ಸಾಧ್ಯವಾಗುತ್ತಿಲ್ಲ ಮತ್ತು ಉತ್ತಮ ಪೈಪೋಟಿ ನೀಡಲು ಆಗುತ್ತಿಲ್ಲ ಅನ್ನೋದು ಐಪಿಎಲ್ನ ಎಲ್ಲ ತಂಡಗಳು ಮತ್ತು ಫ್ರಾಂಚೈಸಿಯ ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಭಾರೀ ಬೇಸರವನ್ನು ಉಂಟುಮಾಡಿದೆ. ಈಗ, ಯುವ ಬ್ಯಾಟರ್ ಆಯುಷ್ ಮಾತ್ರೆ ಈ ಪಟ್ಟಿಗೆ ಸೇರ್ಪಡೆಗೊಂಡಿರುವುದು ಮತ್ತೊಂದು ಬಿಗ್ ಶಾಕ್ ನೀಡಿದೆ.
ತೊಡೆಯ ಭಾಗಕ್ಕೆ ಪೆಟ್ಟು
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪರ ಹೆಚ್ಚುವರಿ ರನ್ಗಳನ್ನು ಕಲೆಹಾಕಿದ್ದ ಆಯುಷ್, ಗಂಭೀರ ಸ್ನಾಯು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ, ಹೆಚ್ಚು ಸಮಯ ಓಡಲು ಸಾಧ್ಯವಾಗಲಿಲ್ಲ. ಎರಡು ಬಾರಿ ರನ್ಔಟ್ನಿಂದ ಬಚಾವ್ ಆದರು. ಕಡೆಗೆ ಕ್ರೀಸ್ನಲ್ಲಿ ನಿಂತು ಆಡಲು ಯೋಚಿಸಿದ ಅವರು, ನೇರವಾಗಿ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಯುವ ಪ್ರತಿಭೆಯ ಸಮಸ್ಯೆಗೆ ಪ್ರತಿಕ್ರಿಯಿಸಿದ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಆಯುಷ್ ಅವರ ತೊಡೆಯ ಸ್ನಾಯು ಹರಿದಿದೆ. ಹೀಗಾಗಿ, ಮುಂಬರುವ ಪಂದ್ಯಗಳಲ್ಲಿ ಅವರು ತಂಡದ ಪರ ಆಡುತ್ತಿಲ್ಲ ಎಂದು ಹೇಳಿದರು.
6ರಿಂದ 12 ವಾರಗಳ ವಿಶ್ರಾಂತಿ
ಪ್ರಸ್ತುತ ಆಸ್ಪತ್ರೆಗೆ ಸೇರಿರುವ ಆಯುಷ್, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, 6ರಿಂದ 12 ವಾರಗಳ ಸಂಪೂರ್ಣ ವಿಶ್ರಾಂತಿ ಯುವ ಆಟಗಾರನಿಗೆ ಅಗತ್ಯವಿದೆ ಎಂದು ಹೇಳಲಾಗಿದೆ. ಇದರ ಪ್ರಕಾರ, ಆಯುಷ್ ಈ ವರ್ಷದ ಐಪಿಎಲ್ನಿಂದ ಹೊರಗುಳಿಯುವುದು ಬಹುತೇಕ ಖಚಿತ. ಅಂಡರ್-19 ಭಾರತ ತಂಡಕ್ಕೆ ಗೆಲ್ಲಿಸಿಕೊಟ್ಟ ಮಾತ್ರೆ, ಈಗ ಇಂಜುರಿಯಿಂದ ತಂಡವನ್ನು ಬಿಟ್ಟು ಹೊರಹೋಗಿರುವುದು ಫ್ಯಾನ್ಸ್ಗಳ ಬೇಸರಕ್ಕೆ ಕಾರಣವಾಗಿದೆ.
ಆಯುಷ್ ಬದಲಿಗೆ ಯಾರು?
ಸ್ನಾಯು ಹರಿತದಿಂದ ತಂಡದಿಂದ ವಿಧಿಯಿಲ್ಲದೇ ಹೊರಹೋಗಿರುವ ಆಯುಷ್ ಜಾಗಕ್ಕೆ ಯಾರನ್ನು ತರುವುದು ಎಂಬ ಚಿಂತೆ ಸದ್ಯ ಫ್ರಾಂಚೈಸಿಗೆ ಕಾಡಲಾರಂಭಿಸಿದೆ. ಅವರ ಜಾಗಕ್ಕೆ ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮ ಆಡಿಸುವ ಸಾಧ್ಯತೆಗಳಿವೆ. ಈಗಾಗಲೇ ಐಪಿಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಉಳಿದಿರುವ ಚೆನ್ನೈ ಪಡೆ, ಕೊನೆ ಸ್ಥಾನಕ್ಕೆ ಸನ್ನಿಹಿತವಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಇದೇ ರೀತಿಯ ಕಳಪೆ ಪ್ರದರ್ಶನ ಮುಂದುವರಿಸಿದರೆ, ಖಂಡಿತ ಬಹುಬೇಗನೇ ಈ ಟೂರ್ನಿಯಿಂದ ಹೊರಗುಳಿಯುವುದು ಖಚಿತ ಎಂಬುದರಲ್ಲಿ ಅನುಮಾನವಿಲ್ಲ.