CSK vs DC ಪಂದ್ಯ, ಸರ್ಫರಾಜ್ ಖಾನ್ ಹಿಡಿದ ಕ್ಯಾಚ್ ದೃಶ್ಯ
- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್‌ಕೆ ಭರ್ಜರಿ ಗೆಲುವು
- ತಂಡಕ್ಕೆ ಬಹುಮುಖ್ಯ ವಿಕೆಟ್ ತಂದುಕೊಟ್ಟ ಸರ್ಫರಾಜ್ ಖಾನ್ ಅದ್ಭುತ ಕ್ಯಾಚ್
- ಕಡಿಮೆ ಮೊತ್ತಕ್ಕೆ ಖರೀದಿಯಾದ ಆಟಗಾರನಿಂದಲೇ ಅತ್ಯುತ್ತಮ ಪ್ರದರ್ಶನ
CSK vs DC: ನಿನ್ನೆ (ಏ.11) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿ ಪಂದ್ಯದಲ್ಲಿ ಸತತ ಮೂರು ಸೋಲುಗಳ ಬಳಿಕ ಸಿಎಸ್‌ಕೆ ಭರ್ಜರಿ ಜಯ ಗಳಿಸಿತು.
23 ರನ್‌ಗಳಿಂದ ಕಡೆಗೂ ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಗೆಲುವು ನೋಡಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಸಿಎಸ್‌ಕೆ ಪಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬಂದಿದ್ದು, ವಿಶೇಷವಾಗಿ ಮೂವರು ಆಟಗಾರರಿಗೆ ಪ್ರತ್ಯೇಕವಾಗಿ ಪ್ರಶಂಸಿಸಲಾಯಿತು. ಡೆಲ್ಲಿಗೆ 212 ರನ್‌ಗಳ ಗುರಿಯನ್ನು ನೀಡುವಲ್ಲಿ ಅತಿದೊಡ್ಡ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ ಅವರ ಅಮೋಘ ಬ್ಯಾಟಿಂಗ್ಗೆ ಅಭಿಮಾನಿಗಳು ಫಿದಾ ಆದರು. ಕೇವಲ 56 ಎಸೆತಗಳಲ್ಲಿ 115 ರನ್ಗಳನ್ನು ಬಾರಿಸುವ ಮೂಲಕ ಸಂಜು ಅಜೇಯರಾಗಿ ಉಳಿದರು.
ಇನ್ನು 18 ರನ್ ಕೊಟ್ಟು 4 ಬಹುಮುಖ್ಯ ವಿಕೆಟ್ ಕಬಳಿಸಿದ ಜೇಮಿ ಓವರ್‌ಟನ್ ಅವರ ಬೌಲಿಂಗ್ ಕಮಾಲ್ ಮಾಡಿತು. ಇದೆಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು, ಸಿಎಸ್‌ಕೆ ಆಟಗಾರ ಸರ್ಫರಾಜ್ ಖಾನ್ ಅವರು ಹಿಡಿದ ಅದೊಂದು ಅದ್ಭುತ ಹಾಗೂ ಆಕರ್ಷಕ ಕ್ಯಾಚ್. ಗುರ್ಜಪ್ನೀತ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದರು. ಇನ್ನೇನು ಬಿಗ್ ಶಾಟ್ಸ್ ಹೊಡೆಯಲು ತುದಿಗಾಲಿನಲ್ಲಿ ನಿಂತಿದ್ದ ಪಟೇಲ್, ಬೌಂಡರಿಯತ್ತ ಬಾರಿಸಿದರು. ಈ ವೇಳೆ, ಬಾಲ್ ಗಾಳಿಯಲ್ಲಿ ಹಾರುತ್ತಿದ್ದಂತೆ ಹಸಿದ ಸಿಂಹದಂತೆ ಜಿಗಿದು ಹಿಡಿದ ಕ್ಯಾಚ್ ಮಾತ್ರ ನೋಡುಗರ ಹುಬ್ಬೇರಿಸಿತು.
ಸರ್ಫರಾಜ್ ಖಾನ್ ಹಿಡಿದ ಕ್ಯಾಚ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹರಾಜಿನಲ್ಲಿ ಯಾರೂ ಖರೀದಿ ಮಾಡದ ಸರ್ಫರಾಜ್ರನ್ನು 75 ಲಕ್ಷ ರೂ.ಗೆ ಕರೆದುಕೊಂಡ ಚೆನ್ನೈ ಪಡೆಗೆ ಇದೀಗ ಹೆಚ್ಚಿನ ಲಾಭವೇ ದೊರೆಯುತ್ತಿದೆ ಎಂಬುದು ಗಮನಾರ್ಹ. ಈ ಸೀಸನ್ನ ಮೊದಲ ಪಂದ್ಯದಿಂದ ನಾಲ್ಕನೇ ಮ್ಯಾಚ್ನವರೆಗೆ ಸರಿಯಾಗಿ ಗಮನಿಸಿ ನೋಡಿದರೆ, ಎಲ್ಲ ಪಂದ್ಯಗಳಲ್ಲಿಯೂ ಸರ್ಫರಾಜ್ರಿಂದ ಉತ್ತಮ ಆಲ್ರೌಂಡ್ ಪ್ರದರ್ಶನ ಲಭಿಸಿದೆ. ಅವರ ಆಟವನ್ನು ನೋಡಿದಾಗ ಅವರಿಗೆ ಕೊಟ್ಟಿರುವ 75 ಲಕ್ಷ ತೀರ ಕಡಿಮೆಯಾಯಿತು. ಇದೇ ರೀತಿ ಉತ್ತಮ ಪ್ರದರ್ಶನ ಮುಂದುವರಿಸಿದರೆ, ಮುಂದಿನ ಹರಾಜಿನಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಬಹುದು.
ನಿನ್ನೆ (ಏ.11) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳಿಂದ ಗೆದ್ದು ತನ್ನ ಮೊದಲ ವಿಜಯವನ್ನು ಸಾಧಿಸಿತು. ಸಂಜು ಸ್ಯಾಮ್ಸನ್ ಅವರ ಅಜೇಯ 56 ಎಸೆತಗಳ 115 ರನ್‌ಗಳ ಶತಕ ಮತ್ತು ಆಯುಷ್ ಮಾತ್ರೆಯ 59 ರನ್‌ಗಳ ನೆರವಿನೊಂದಿಗೆ ಸಿಎಸ್‌ಕೆ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದು 212 ರನ್‌ಗಳ ಭಾರೀ ಮೊತ್ತ ಕಟ್ಟಿತು.
ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪಥುಮ್ ನಿಸ್ಸಾಂಕ (41) ಮತ್ತು ಟ್ರಿಸ್ಟನ್ ಸ್ಟಬ್ಸ್ (60) ಅವರ ಪ್ರಯತ್ನಗಳ ಹೊರತಾಗಿಯೂ 189 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಂಡಿತು. ಜೇಮಿ ಓವರ್‌ಟನ್ ಅವರ 4 ವಿಕೆಟ್‌ಗಳ (4-18) ಮತ್ತು ಅಂಶುಲ್ ಕಾಂಬೋಜ್ ಅವರ 3 ವಿಕೆಟ್‌ಗಳ ಪ್ರಭಾವಿ ಬೌಲಿಂಗ್ ಸಿಎಸ್‌ಕೆಯ ಗೆಲುವಿಗೆ ನೆರವಾಯಿತು. ಈ ಗೆಲುವಿನೊಂದಿಗೆ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಖಾತೆ ತೆರೆದರೆ, ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸೋಲು ಅನುಭವಿಸಿದೆ.