CSK 
ಕ್ರಿಕೆಟ್

CSK ಆಟಗಾರನ ತಾಯಿ ನಿಧನ: ಸಂಕಷ್ಟದ ಸಮಯದಲ್ಲಿ ಆಸರೆಯಾದ 'ಕ್ಯಾಪ್ಟನ್ ಕೂಲ್' ಧೋನಿ!

ಚೆನ್ನೈ: ಐಪಿಎಲ್ 2026ರ ಸಂಭ್ರಮದ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವೇಗದ ಬೌಲರ್ ಮುಖೇಶ್ ಚೌಧರಿ ಅವರ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ. ಮುಖೇಶ್ ಅವರ ತಾಯಿ ಪ್ರೇಮ್ ದೇವಿ (50) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಮುಗಿಯುತ್ತಿದ್ದಂತೆಯೇ ತಾಯಿಯ ಆರೋಗ್ಯದ ಸ್ಥಿತಿ ಗಂಭೀರವಾಗಿರುವ ವಿಷಯ ತಿಳಿದು ಮುಖೇಶ್ ಚೌಧರಿ ತವರು ಗ್ರಾಮವಾದ ರಾಜಸ್ಥಾನದ ಭಿಲ್ವಾರಾಕ್ಕೆ ತೆರಳಿದ್ದರು. ಹಿರಿಯಣ್ಣ ಡಾ. ರಾಜೇಶ್ ಚೌಧರಿ ಅವರೊಂದಿಗೆ ಸೇರಿ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಈ ಋತುವಿನಲ್ಲಿ ಸಿಎಸ್‌ಕೆ ಪರ ಒಂದು ಪಂದ್ಯ ಆಡಿರುವ ಮುಖೇಶ್, ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದು ತಿಳಿದುಬಂದಿದೆ.

ಧೋನಿ ತೋರಿದ ಮಾನವೀಯತೆ

ಸಂಕಷ್ಟದ ಸಮಯದಲ್ಲಿ ಮುಖೇಶ್ ಚೌಧರಿ ಅವರಿಗೆ ಮಾಜಿ ನಾಯಕ ಎಂ.ಎಸ್. ಧೋನಿ ಬೆನ್ನೆಲುಬಾಗಿ ನಿಂತಿದ್ದಾರೆ. ಮುಖೇಶ್ ತಾಯಿ ಆಸ್ಪತ್ರೆಯಲ್ಲಿದ್ದಾಗ ಧೋನಿ ಖುದ್ದಾಗಿ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ, ತಾಯಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖೇಶ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬಿದ್ದಾರೆ. ಧೋನಿಯ ಈ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅವರು ಕೇವಲ ಆಟಗಾರರ ನಾಯಕನಲ್ಲ, ಮಾರ್ಗದರ್ಶಕ ಕೂಡ ಹೌದು ಎಂದು ಕೊಂಡಾಡುತ್ತಿದ್ದಾರೆ.

ಧೋನಿ ಫಿಟ್‌ನೆಸ್ ಅಪ್‌ಡೇಟ್

ಇತ್ತ ಧೋನಿ ಕೂಡ ಕಾಲಿನ ಸ್ನಾಯು ಸೆಳೆತದಿಂದಾಗಿ (Calf Strain) ಈ ಋತುವಿನಲ್ಲಿ ಇನ್ನೂ ಕಣಕ್ಕಿಳಿದಿಲ್ಲ. ಮಂಗಳವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಅವರ ಲಭ್ಯತೆಯ ಬಗ್ಗೆ ಬೌಲಿಂಗ್ ಕೋಚ್ ಎರಿಕ್ ಸೈಮನ್ಸ್ ಮಾತನಾಡುತ್ತಾ, "ವೈದ್ಯಕೀಯ ತಂಡ ಮತ್ತು ಧೋನಿ ತಮ್ಮ ಫಿಟ್‌ನೆಸ್ ಬಗ್ಗೆ ತೃಪ್ತರಾದಾಗ ಮಾತ್ರ ಅವರು ಕಣಕ್ಕಿಳಿಯಲಿದ್ದಾರೆ" ಎಂದು ತಿಳಿಸಿದ್ದಾರೆ.
ಮೈದಾನದಲ್ಲಿ ಅಭ್ಯಾಸದ ನಡುವೆಯೇ ಧೋನಿ ಅಲ್ಲಿರುವ ರೋಬೋಟ್ ನಾಯಿಯ ಜೊತೆ ಆಟವಾಡುತ್ತಾ ಸಮಯ ಕಳೆದಿದ್ದು ಎಲ್ಲರ ಗಮನ ಸೆಳೆಯಿತು,(ಏಜೆನ್ಸೀಸ್​).