SRHvsCSK: ಇಂದು ( ಶನಿವಾರ ಏ.18) ಹೈದ್ರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎಸ್ಆರ್ಎಚ್ ತಂಡ 10 ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದ ಚೆನ್ನೈ ತಂಡ ಎಸ್ಆರ್ಎಚ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು, ಇದು ಈ ಆವೃತಿಯ ಐಪಿಎಲ್ನಲ್ಲಿ ಜಂಟಿ ವೇಗದ ಅರ್ಧಶತಕ (ವೈಭವ್ ಸೂರ್ಯವಂಶಿ ದಾಖಲೆಯನ್ನು ಸರಿದೂಗಿಸಿದರು). ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (59 ರನ್, 39 ಎಸೆತ) ಜವಾಬ್ದಾರಿಯುತ ಆಟದ ಮೂಲಕ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ದಾಖಲಿಸಿತು. ಚೆನ್ನೈ ಪರ ಬೌಲಿಂಗ್‌ನಲ್ಲಿ ಜೆಮಿ ಓವರ್‌ಟನ್ ಮತ್ತು ಅಂಶುಲ್ ಕಾಂಬೋಜ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಮುಖೇಶ್ ಚೌಧರಿ ಎರಡು ವಿಕೆಟ್ ಕಬಳಿಸಿದರು.
ಪವರ್‌ಪ್ಲೇನಲ್ಲಿ ಸಿಎಸ್‌ಕೆ ಅಬ್ಬರ; ಮಧ್ಯದಲ್ಲಿ ಮಲಿಂಗಾ ಮೋಡಿ
195 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭ ಉತ್ತಮವಾಗಿರಲಿಲ್ಲ ತಂಡದ ಮೊತ್ತ 15 ಆಗಿದ್ದಾಗ ಸಂಜು ಸ್ಯಾಮ್ಸನ್ ಔಟ್ ಆದರೆ, ನಾಯಕ ರುತುರಾಜ್ 19 ರನ್ಗಳಿಸಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ವೈಫಲ್ಯದ ಹೊರತಾಗಿಯೂ ಸಿಎಸ್‌ಕೆ 76 ರನ್ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಬಂದ ಆಯುಷ್ ಮಾತ್ರೆ (30 ರನ್, 13 ಎಸೆತ) ಮತ್ತು ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್ (34 ರನ್, 30 ಎಸೆತ) ತಂಡದ ಮೊತ್ತವನ್ನು ಚೇತರಿಸುವಂತೆ ಮಾಡಿದರು ಕೂಡ ತಂಡವನ್ನು ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.
ಹೈದ್ರಾಬಾದ್ ಪರ ಕರಾರುವಾಕ್ ದಾಳಿ ನಡೆಸಿದ ಇಶಾನ್ ಮಲಿಂಗಾ ಪ್ರಮುಖ ಮೂರು ವಿಕೆಟ್ ಪಡೆದು ಸಿಎಸ್‌ಕೆ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇದರಿಂದಾಗಿ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದ್ದ ಚೆನ್ನೈ 10 ರನ್‌ಗಳ ಸೋಲನುಭವಿಸಿತು(ಏಜೆನ್ಸೀಸ್).