- 2024ರಲ್ಲಿ 8.4 ಕೋಟಿ ರೂ.ಗೆ ಖರೀದಿ
- 2025ರಲ್ಲಿ ಕೇವಲ 95 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು
- ಎರಡೇ ಪಂದ್ಯಗಳಲ್ಲಿ ತಂಡದ ಪರ ಸ್ಫೋಟಕ ಇನ್ನಿಂಗ್ಸ್
IPL 2026: ಮಾ.28ರಿಂದ ಆರಂಭಗೊಂಡ ಐಪಿಎಲ್ 19ನೇ ಆವೃತ್ತಿಯ ಪ್ರತಿ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿವೆ. ಆದರೆ, ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳನ್ನು ಹೊರತುಪಡಿಸಿ. ಇದಕ್ಕೆ ಮುಖ್ಯ ಕಾರಣವೇ, ಫ್ರಾಂಚೈಸಿ ಹರಾಜು ಪ್ರಕ್ರಿಯೆಯಲ್ಲಿ ಮಾಡಿಕೊಂಡ ಎಡವಟ್ಟು. ಆಡಿರುವ ಎರಡು ಪಂದ್ಯಗಳಲ್ಲಿಯೂ ಹೀನಾಯ ಸೋಲುಂಡಿರುವ ಸಿಎಸ್ಕೆ, ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಸರಿಯಾದ ಬ್ಯಾಟಿಂಗ್ ಹಾಗೂ ಬಲಿಷ್ಠ ಬೌಲಿಂಗ್ ಯೂನಿಟ್ ಹೊಂದದ ಸಿಎಸ್ಕೆ ಪಡೆಗೆ 19ನೇ ಆವೃತ್ತಿಯಲ್ಲಿ ಗೆಲುವು ಬಹುದೂರ ಎನ್ನುವಂತೆ ಮಾಡಿಟ್ಟಿದೆ. ಕ್ಯಾಪ್ಟನ್ ಸ್ಥಾನದಲ್ಲಿರುವ ರುತುರಾಜ್ ಗಾಯಕ್ವಾಡ್ರಿಂದ ಯಾವುದೇ ಒಳ್ಳೆಯ ಇನ್ನಿಂಗ್ಸ್ ಬಂದಿಲ್ಲ. ಮತ್ತೊಂದೆಡೆ, ಉತ್ತಮ ನಾಯಕತ್ವವೂ ಕಾಣುತ್ತಿಲ್ಲ. ಉಳಿದ ಆಟಗಾರರು ಕೂಡ ತಮ್ಮ ತಮ್ಮ ಸಾಮರ್ಥ್ಯವನ್ನು ತೋರುವಲ್ಲಿ ವಿಫಲರಾಗುತ್ತಿರುವುದು ತಂಡದ ಹಳೆಯ ಗುಣಮಟ್ಟವನ್ನು ಗಾಳಿಯಲ್ಲಿ ತೂರಿದೆ.
ಆಡಿರುವ ಎರಡು ಮ್ಯಾಚ್ಗಳಲ್ಲಿ ಕಳಪೆ ಪ್ರದರ್ಶನ ನೀಡಿ, ಹೀನಾಯ ಸೋಲು ಅನುಭವಿಸಿರುವ ಚೆನ್ನೈ ಪಡೆಗೆ ಸಮೀರ್ ರಿಜ್ವಿ ಉತ್ತಮ ಆಟಗಾರರಾಗಿದ್ದರು. ಆದರೆ, ಹರಾಜು ಪ್ರಕ್ರಿಯೆಗೂ ಮುನ್ನ ಅವರನ್ನು ತಂಡದಿಂದ ರಿಲೀಸ್ ಮಾಡಿದ ಸಿಎಸ್ಕೆ, ಅವರ ಬದಲಿಗೆ ಬೇರೆ ಆಟಗಾರನನ್ನು ಖರೀದಿಸಿತು. ಚೆನ್ನೈ ಪಡೆ ಕೈಬಿಟ್ಟ ರಿಜ್ವಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತೆಕ್ಕೆಗೆ ಕರೆದುಕೊಂಡಿತು. ಇಲ್ಲೇ ಆಗಿದ್ದು ಎಡವಟ್ಟು. ಸದ್ಯ ಡೆಲ್ಲಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸಮೀರ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಿಜಕ್ಕೂ ಗಮನಾರ್ಹ.
ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯರಾಗಿ 47 ಎಸೆತಕ್ಕೆ 70 ರನ್ ಬಾರಿಸಿದ ರಿಜ್ವಿ, ಮುಂಬೈ ಇಂಡಿಯನ್ಸ್ ಎದುರು ಕೂಡ ಭರ್ಜರಿ ಇನ್ನಿಂಗ್ಸ್ ನೀಡಿದರು. 51 ಎಸೆತಕ್ಕೆ 90 ರನ್ ಸಿಡಿಸಿದರು. ಎರಡು ಬಹುಮುಖ್ಯ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾದ ಸಮೀರ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ಕೂಡ ಲಭಿಸಿತು. ಇದನ್ನು ಗಮನಿಸಿದ ಕ್ರಿಕೆಟ್ ಪ್ರೇಮಿಗಳು ಸದ್ಯ ಸಿಎಸ್ಕೆ ಫ್ರಾಂಚೈಸಿಗೆ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಉಗಿದಿದ್ದಾರೆ.
8.4 ಕೋಟಿ ಎಲ್ಲಿ? 95 ಲಕ್ಷ ರೂ. ಎಲ್ಲಿ?
ಇದೇ ಸಿಎಸ್ಕೆ 2024ರ ಹರಾಜಿನಲ್ಲಿ 8.4 ಕೋಟಿ ರೂ.ಗೆ ರಿಜ್ವಿಯನ್ನು ತಮ್ಮ ತಂಡಕ್ಕೆ ಖರೀದಿ ಮಾಡಿತು. ಆದರೆ, ಒಂದೇ ವರ್ಷಕ್ಕೆ ಅವರನ್ನು ರಿಲೀಸ್ ಮಾಡಿತು. ಇದನ್ನೇ ಲಾಭ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಬುದ್ಧಿವಂತಿಕೆ ಬಳಸಿ, ಕೇವಲ 95 ಲಕ್ಷ ರೂ.ಗೆ ಅವರನ್ನು ಖರೀದಿಸಿತು. ಇದೀಗ, ಕಡಿಮೆ ಮೊತ್ತಕ್ಕೆ ಕೊಂಡುಕೊಂಡ ಡಿಸಿ ಪರ ರಿಜ್ವಿ ಸ್ಫೋಟಕ ಇನ್ನಿಂಗ್ಸ್ ನೀಡುತ್ತಿರುವುದು ಹಲವರ ಹುಬ್ಬೇರಿಸಿದೆ.