ಸಿಎಸ್‌ಕೆಗೆ ಗೆಲುವಿನ ಓಟ ವಿಸ್ತರಿಸುವ ತವಕ: ಇಂದು ಲಖನೌ ಸೂಪರ್‌ಜೈಂಟ್ಸ್ ಸವಾಲು 
ಕ್ರಿಕೆಟ್

ಸಿಎಸ್‌ಕೆಗೆ ಗೆಲುವಿನ ಓಟ ವಿಸ್ತರಿಸುವ ತವಕ: ಇಂದು ಲಖನೌ ಸೂಪರ್‌ಜೈಂಟ್ಸ್ ಸವಾಲು

ಲಖನೌ: ಗಾಯದ ಸಮಸ್ಯೆಯಿಂದ ಪ್ರಮುಖ ಆಟಗಾರರು ಟೂರ್ನಿ ತಪ್ಪಿಸಿಕೊಳ್ಳುತ್ತಿರುವ ನಡುವೆಯೂ ಪ್ಲೇಆ್ ಆಸೆ ಜೀವಂತವಿರಿಸಿಕೊಂಡಿರುವ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ಐಪಿಎಲ್-19ರಲ್ಲಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಋತುರಾಜ್ ಗಾಯಕ್ವಾಡ್ ಪಡೆ ಏಕನಾದಲ್ಲಿ ಶುಕ್ರವಾರ ಲಖನೌ ಸೂಪರ್‌ಜೈಂಟ್ಸ್ ಸವಾಲು ಎದುರಿಸಲಿದ್ದು, ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಐದು ದಿನಗಳ ಅಂತರದಲ್ಲಿ ಉಭಯ ತಂಗಳು ಎರಡನೇ ಬಾರಿಗೆ ಎದುರಾಗಲಿದ್ದು, ಚೆಪಾಕ್‌ನಲ್ಲಿ ನಡೆದ ಹಿಂದಿನ ಮುಖಾಮುಖಿಯಲ್ಲಿ ಸಿಎಸ್‌ಕೆ 5 ವಿಕೆಟ್‌ನಿಂದ ಗೆದ್ದಿತ್ತು. ಆರಂಭಿಕ ಮೂರು ಸೋಲು ನಂತರ ಆಡಿದ 8ರಲ್ಲಿ 6 ಗೆದ್ದು ಪುಟಿದೇಳುವ ಮೂಲಕ ಋತುರಾಜ್ ಪಡೆ ಸವಾಲು ಜೀವಂತವಿರಿಸಿದೆ. ಲಖನೌ ಸೂಪರ್‌ಜೈಂಟ್ಸ್ ಪಾಲಿಗೆ ಉಳಿದಿರುವ ಮೂರು ಪಂದ್ಯಗಳ ಪ್ರತಿಷ್ಠೆಯ ಕಾದಾಟ ಎನಿಸಿದ್ದು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
ಟೂರ್ನಿಯ ನಿರ್ಣಾಯಕ ಹಂತದಲ್ಲಿ ಸಿಎಸ್‌ಕೆಗೆ ಫಿನಿಷರ್‌ಗಳ ಕೊರತೆ ಇದೆ. ಡಿವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮ ಮತ್ತು ಶಿವಂ ದುಬೆ ಅವರಿಂದ ಮಧ್ಯಮ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಕಂಡುಬಂದಿಲ್ಲ. ಅಗ್ರ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (430), ಊರ್ವಿಲ್ ಪಟೇಲ್, ಋತುರಾಜ್ ಮೇಲೆ ಅವಲಂಬಿತವಾಗಿದೆ. ಆಲ್ರೌಂಡರ್ ಜೇಮಿ ಓವರ್ಟನ್ ಸ್ನಾಯುಸೆಳೆತದ ಸಮಸ್ಯೆಯಿಂದ ಟೂರ್ನಿಯ ಉಳಿದ ಪಂದ್ಯಕ್ಕೆ ಅಲಭ್ಯರಾಗಿದ್ದು, ಸಿಎಸ್‌ಕೆ ಬೌಲಿಂಗ್ ವಿಭಾಗಕ್ಕೆ ಹಿನ್ನಡೆ ತಂದಿದೆ. ಅಂಶುಲ್ ಕಂಬೋಜ್ (19) ವಿಕೆಟ್ ಪಡೆದರೂ ದುಬಾರಿ ಆಗಿದ್ದು, ಏಕನಾ ಪಿಚ್‌ನಲ್ಲಿ ನೂರ್ ಅಹ್ಮದ್, ಅಕೀಲ್ ಹೊಸೈನ್ ಲಖನೌ ಬ್ಯಾಟರ್ಸ್‌ಗಳನ್ನು ಕಾಡಬಲ್ಲರು. ಲಖನೌ ತಂಡ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ ಅರ್ಹತೆ ಪಡೆಯುವುದಿಲ್ಲ. ಮುಂದಿನ ಆವೃತ್ತಿಗೆ ಗೆಲುವಿನ ಸಂಯೋಜನೆ ಕಂಡುಕೊಳ್ಳಲು ಉಳಿದ ಪಂದ್ಯಗಳು ಉತ್ತಮ ಅವಕಾಶ ಎನಿಸಿದೆ.
ಚೆನ್ನೈ ಪ್ಲೇಆ್ ಹಾದಿ
ಸಿಎಸ್‌ಕೆ 12 ಅಂಕದೊಂದಿಗೆ ಅಂಕಪಟ್ಟಿಯ 5ನೇ ಸ್ಥಾನದಲ್ಲಿದ್ದು, ಉಳಿದ ಮೂರರಲ್ಲಿಯೂ ಗೆದ್ದರೆ ಗರಿಷ್ಠ 18 ಅಂಕ ಕಲೆಹಾಕಲಿದ್ದು, ಅಗ್ರ-4ರಲ್ಲಿ ಸ್ಥಾನ ಪಡೆಯುವ ಫೇವರಿಟ್ ಎನಿಸಲಿದೆ. ಸನ್‌ರೈಸರ್ಸ್‌ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆಲ್ಲಲ್ಲೇಬೇಕಾದ ಒತ್ತಡಲಿದ್ದು, ಎರಡರಲ್ಲಿ ಗೆದ್ದರೂ ಸವಾಲು ಜೀವಂತವಿರಲಿದೆ. ಸಿಎಸ್‌ಕೆ 16 ಅಂಕ ಕಲೆಹಾಕಿದರೆ ಇತರ ತಂಡಗಳ ಫಲಿತಾಂಶ ಜತೆಗೆ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ಲೇಆ್ ರೇಸ್‌ನಲ್ಲಿ ಉಳಿಯಲಿದೆ. ಮೂರರಲ್ಲಿ 1 ಗೆದ್ದರೆ ಲೀಗ್‌ನಲ್ಲಿ ನಿರ್ಗಮಿಸಲಿದೆ. ಲಖನೌ ಆಡಿರುವ 11ರಲ್ಲಿ 3 ಜಯ, 8 ಸೋಲಿನೊಂದಿಗೆ 6 ಅಂಕ ಹೊಂದಿದೆ.
ಮುಖಾಮುಖಿ: 7
ಸಿಎಸ್‌ಕೆ: 3
ಲಖನೌ: 3
ರದ್ದು:1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್