ಸಿಎಸ್ಕೆ-ಎಸ್ಆರ್ಎಚ್ ಪಂದ್ಯದ ನಡುವಿನ ದೃಶ್ಯ
- ಸಿಎಸ್ಕೆ ಮತ್ತು ಎಸ್ಆರ್ಎಚ್ ನಡುವಿನ ಐಪಿಎಲ್ ಪಂದ್ಯ
- ಸನ್‌ರೈಸರ್ಸ್ ಹೈದರಾಬಾದ್ ಫ್ಯಾನ್ ನಡೆಗೆ ಸಿಎಸ್ಕೆ ಫ್ರಾಂಚೈಸಿ ಕಿಡಿ?
- ಅಷ್ಟಕ್ಕೂ ಆಗಿದ್ದೇನು? ನಿಜಕ್ಕೂ ಮೈದಾನದಲ್ಲಿ ಇದೆಲ್ಲ ನಡೆಯಿತೇ?
ಹೈದರಾಬಾದ್: ಐಪಿಎಲ್ 19ನೇ ಆವೃತ್ತಿಯ ಭಾಗವಾಗಿ, ಶನಿವಾರ (ಏ.18) ಹೈದರಾಬಾದ್‌ನ ಉಪ್ಪಾಲ್ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 10 ರನ್ಗಳ ರೋಚಕ ಗೆಲುವು ದಾಖಲಿಸಿತು. ಆದರೆ, ಪಂದ್ಯದ ವೇಳೆ ಎಸ್ಆರ್ಎಚ್ ಅಭಿಮಾನಿಗಳಿಂದ ಆದ ಕೆಲವು ಅಹಿತಕರ ಘಟನೆಗಳು ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ತೀರ ಬೇಸರ ತಂದಂತಿದೆ.
ಇಶಾನ್ ಕಿಶನ್ ಪಡೆ ನೀಡಿದ 196 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಪವರ್ಪ್ಲೇಯಲ್ಲಿ ಉತ್ತಮ ಸ್ಕೋರ್ ಬಂದಿದ್ದೇ ಆದರೂ ನಂತರದ ಓವರ್ಗಳಲ್ಲಿ ಹೆಚ್ಚುವರಿ ರನ್ಗಳು ಬರಲಿಲ್ಲ. ತಂಡದ ಸ್ಫೋಟಕ ಬ್ಯಾಟರ್ಗಳಾದ ಆಯುಷ್ ಮಾತ್ರೆ, ಡೆವಾಲ್ಡ್ ಬ್ರೆವಿಸ್, ಸರ್ಫರಾಜ್ ಖಾನ್ ಮತ್ತು ಶಾರ್ಟ್ರಂತಹ ಬ್ಯಾಟರ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲದೆ, ಸೀದಾ ಪೆವಿಲಿಯನ್ಗೆ ಮರಳಿದರು. ಇದು ತಂಡದ ಅಭಿಮಾನಿಗಳ ನಿರಾಶೆಗೆ ಕಾರಣವಾಯಿತು. ಮತ್ತೊಂದೆಡೆ, ಸಿಎಸ್ಕೆ ಚೇಸಿಂಗ್ನಲ್ಲಿದ್ದ ವೇಳೆ ಎಸ್ಆರ್ಎಚ್ ಅಭಿಮಾನಿಗಳು ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಯಾವುದೋ ಮಂತ್ರ ಹೇಳುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ತಂಡವನ್ನು ಗೆಲ್ಲಿಸಲು ಕ್ರೀಸ್ಗೆ ಅಂಟಿ ನಿಂತಿದ್ದ ಶಿವಂ ದುಬೆ, ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿದ್ದರು. ಇದೇ ವೇಳೆ, ಮೈದಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಯೊಬ್ಬರು, ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಮಂತ್ರ ಹೇಳಿಬಿಟ್ಟ ಕೂಡಲೇ ದುಬೆ ಅವರ ವಿಕೆಟ್ ಹೋಗುತ್ತದೆ. ಇದನ್ನು ಕಂಡ ಕ್ಷಣ ಅವರು ತೀರ ಖುಷಿಯಿಂದ ಸಂಭ್ರಮಿಸುತ್ತಾರೆ. ಈ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ, ಚೆನ್ನೈ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ ಎಂಬ ಪತ್ರವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಕಾರಣ, ಈ ಕುರಿತಂತೆ ಫ್ರಾಂಚೈಸಿ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಅಥವಾ ಪತ್ರವನ್ನು ಹಂಚಿಕೊಂಡಿರುವುದು ಕಂಡುಬಂದಿಲ್ಲ.
ದೋಸೆ, ಇಡ್ಲಿ, ಸಾಂಬಾರ್....
ಇತ್ತೀಚೆಗಷ್ಟೇ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದಂತೆ ಸಿಎಸ್ಕೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ದೂರು ನೀಡಿತು. ಏಪ್ರಿಲ್ 5ರಂದು ತಮ್ಮ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲೇ ಆರ್ಸಿಬಿ ನಮಗೆ ಕಿರುಕುಳ ನೀಡಿದೆ ಮತ್ತು ಅಗೌರವದಿಂದ ವರ್ತಿಸಿದೆ ಎಂದು ಆರೋಪಿಸಿ ಸಿಎಸ್ಕೆ, ಬಿಸಿಸಿಐಗೆ ದೂರು ಸಲ್ಲಿಸಿದೆ ಎಂದು ವರದಿಯಾಯಿತು. ಇದು ಕೆಲ ಕ್ರಿಕೆಟ್ ಅಭಿಮಾನಿಗಳಿಗೆ ನಗು ತರಿಸಿದರೆ, ಇನ್ನೂ ಕೆಲವರಲ್ಲಿ ಆಶ್ಚರ್ಯ ಉಂಟುಮಾಡಿತು.