- ಐಪಿಎಲ್ 19ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಲ್ಲಿ ಸಿಎಸ್‌ಕೆ
- ಸರಣಿ ಸೋಲಿನ ಜೊತೆಗೆ ಆಟಗಾರರ ಇಂಜುರಿ ಸಮಸ್ಯೆ
- ತಂಡದಿಂದ ಮತ್ತೊಬ್ಬ ಸ್ಟಾರ್ ಆಟಗಾರ ಹೊರಗೆ
CSK: ಅದೇನೋ ಐಪಿಎಲ್ 19ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. 200 ರನ್ಗಳ ಟಾರ್ಗೆಟ್ ನೀಡಿದರೂ ಸಹ ಸೋಲಿನಿಂದ ಬಚಾವ್ ಆಗಲು ಆಗುತ್ತಿಲ್ಲ. ಮತ್ತೊಂದೆಡೆ, ತಂಡದಲ್ಲಿ ಸ್ಟಾರ್ ಆಟಗಾರರ ಇಂಜುರಿಯಿಂದ ನಿರೀಕ್ಷಿತ ಗೆಲುವು ನೋಡಲು ಸಾಧ್ಯವಾಗುತ್ತಿಲ್ಲ. ಕಳಪೆ ಪ್ರದರ್ಶನ ಮತ್ತು ಸರಣಿ ಸೋಲಿನ ಬೆನ್ನಲ್ಲೇ ಮತ್ತೊಬ್ಬ ಆಟಗಾರನ ಅಲಭ್ಯತೆ ತಂಡಕ್ಕೆ ಕಾಡಲಾರಂಭಿಸಿದೆ.
ಈಗಾಗಲೇ ತಂಡದ ಬೆನ್ನೆಲುಬಾದ ಮಹೇಂದ್ರ ಸಿಂಗ್ ಧೋನಿ, ನಾಥನ್ ಎಲ್ಲಿಸ್ ಮತ್ತು ವೇಗಿ ಖಲೀಲ್ ಅಹ್ಮದ್ ಇಂಜುರಿ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಇವರ ಅಲಭ್ಯತೆ ಸಿಎಸ್‌ಕೆ ಗೆಲುವಿನ ಹಾದಿಗೆ ಮರಳಲು ಸಾಧ್ಯವಾಗುತ್ತಿಲ್ಲ ಮತ್ತು ಉತ್ತಮ ಪೈಪೋಟಿ ನೀಡಲು ಆಗುತ್ತಿಲ್ಲ. ಇದು ತಂಡದ ಅಭಿಮಾನಿಗಳಿಗೆ ಭಾರೀ ಬೇಸರವನ್ನು ಉಂಟುಮಾಡಿದೆ. ಈಗ, ಯುವ ಬ್ಯಾಟರ್ ಆಯುಷ್ ಮಾತ್ರೆ ಈ ಪಟ್ಟಿಗೆ ಸೇರ್ಪಡೆಗೊಂಡಿರುವುದು ಶಾಕ್ ನೀಡಿದೆ.
ತೊಡೆಯ ಭಾಗಕ್ಕೆ ಪೆಟ್ಟು
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪರ ಹೆಚ್ಚುವರಿ ರನ್ಗಳನ್ನು ಕಲೆಹಾಕಿದ್ದ ಆಯುಷ್, ಗಂಭೀರ ಸ್ನಾಯು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ, ಹೆಚ್ಚು ಸಮಯ ಓಡಲು ಸಾಧ್ಯವಾಗಲಿಲ್ಲ. ಎರಡು ಬಾರಿ ರನ್ಔಟ್ನಿಂದ ಬಚಾವ್ ಆದರು. ಕಡೆಗೆ ಕ್ರೀಸ್ನಲ್ಲಿ ನಿಂತು ಆಡಲು ಯೋಚಿಸಿದ ಅವರು, ನೇರವಾಗಿ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಯುವ ಪ್ರತಿಭೆಯ ಸಮಸ್ಯೆಗೆ ಪ್ರತಿಕ್ರಿಯಿಸಿದ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಆಯುಷ್ ಅವರ ತೊಡೆಯ ಸ್ನಾಯು ಹರಿದಿದೆ ಎಂದು ಹೇಳಿದರು.
ಕಳಪೆ ಫಾರ್ಮ್, ಸಿಗದ ಗೆಲುವು
ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು ಬಿಟ್ಟರೆ, ಉಳಿದೆಲ್ಲ ಪಂದ್ಯಗಳನ್ನು ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಟಗಾರರಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ಗಳಿಂದ ಹೆಚ್ಚು ರನ್ಗಳು ಬರುತ್ತಿಲ್ಲ. ನಾಯಕ ಮತ್ತು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ರುತುರಾಜ್ ಗಾಯಕ್ವಾಡ್ ಒಳ್ಳೆಯ ಆರಂಭವು ನೀಡುತ್ತಿಲ್ಲ, ಕ್ಯಾಪ್ಟನ್ ಆಟವನ್ನೂ ಪ್ರದರ್ಶಿಸುತ್ತಿಲ್ಲ. ಇನ್ನು ಸಂಜು ಸ್ಯಾಮ್ಸನ್ ಒಂದು ಪಂದ್ಯದಲ್ಲಿ ಶತಕ ಬಾರಿಸಿದ್ದು ಬಿಟ್ಟರೆ, ಎಂದಿನಂತೆ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ.
ಅವರ ನಂತರದಲ್ಲಿ ಬರುವ ಆಯುಷ್ ಮಾತ್ರೆ, ಶಿವಂ ದುಬೆ, ಮ್ಯಾಥ್ಯೂವ್ ಶಾರ್ಟ್, ಜೇಮೀ ಓವರ್ಟರ್ನ್, ಬ್ರೆವಿಸ್ ಯಾರೊಬ್ಬರೂ ಸಹ ತಮ್ಮ ಆಟವನ್ನು ಆಡುತ್ತಿಲ್ಲ. ಇನ್ನು ಬೌಲಿಂಗ್ನಲ್ಲಿ ಕಮಾಲ್ ಮಾಡಲು ಪ್ರಯತ್ನಿಸುತ್ತಿದ್ದ ಖಲೀಲ್ ಅಹ್ಮದ್, ಈಗ ಇಂಜುರಿಯಿಂದ ಹೊರಗುಳಿದಿದ್ದಾರೆ. ಉಳಿದ ವೇಗಿಗಳು ಮತ್ತು ಸ್ಪಿನ್ನರ್ ನೂರ್ ಅಹ್ಮದ್ ಮೆಚ್ಚುವಂತ ಪ್ರದರ್ಶನವನ್ನು ನೀಡದಿರುವುದು ತಂಡದ ಸರಣಿ ಸೋಲಿಗೆ ಕಾರಣವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.