CSK vs RR ನಡುವಿನ ಐಪಿಎಲ್ ಪಂದ್ಯ
- ಗುವಾಹಟಿಯಲ್ಲಿ ಸಿಎಸ್ಕೆ ಮತ್ತು ಆರ್ಆರ್ ನಡುವೆ ಮೂರನೇ ಐಪಿಎಲ್ ಪಂದ್ಯ
- ಸಿಎಸ್ಕೆ ನೀಡಿದ 128 ರನ್ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಆರ್ಆರ್
- ವೈಭವ್ ಸೂರ್ಯವಂಶಿ ಆರ್ಭಟಕ್ಕೆ ತತ್ತರಿಸಿದ ಚೆನ್ನೈ ಪಡೆ
CSK vs RR: ಇಂದು (ಮಾ.30) ಅಸ್ಸಾಂನ ಗುವಾಹಟಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಓನ್ ಸೈಡೆಡ್ ಆದ ಪಂದ್ಯದಲ್ಲಿ ರಾಜಸ್ಥಾನ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಬಾರಿಸಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್ಆರ್, ರುತುರಾಜ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್ ಮಾಡಿದ ಸಿಎಸ್ಕೆಗೆ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಸಾಥ್ ನೀಡಲಿಲ್ಲ. 19.4 ಓವರ್ಗೆ ಆಲ್ಔಟ್ ಆದ ಸಿಎಸ್ಕೆ, ಕೇವಲ 127 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಆರ್ಆರ್ ಪಡೆಗೆ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ರಿಂದ ಉತ್ತಮ ಜತೆಯಾಟ ಸಿಕ್ಕಿತು.
3ನೇ ಅತಿ ವೇಗದ ಅರ್ಶಶತಕ
17 ಎಸೆತಕ್ಕೆ 52 ರನ್ ದಾಖಲಿಸಿದ ಸೂರ್ಯವಂಶಿ, 4 ಬೌಂಡರಿ ಮತ್ತು ಐದು ಸಿಕ್ಸರ್ಗಳನ್ನು ಬಾರಿಸಿದರು. 305.88 ಸ್ಟ್ರೈಕ್ರೇಟ್ನಲ್ಲಿ ಆಡಿದ ವೈಭವ್, ಸಿಎಸ್ಕೆ ಬೌಲರ್ಗಳ ಬೆವರಿಳಿಸಿದ್ದು ನೋಡುಗರಿಗೆ ಮನರಂಜನೆಯ ರಸದೌತಣ ನೀಡಿತು. ಈ ಮೂಲಕ ವೈಭವ್, ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿವೇಗದ ಅರ್ಧಶತಕ ದಾಖಲಿಸಿದರು. ಅವರ ಬಳಿಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಯಶಸ್ವಿ, 37 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು.
ಬೌಲಿಂಗ್ನಲ್ಲೂ ಮಿಂಚಿದ ಆರ್ಆರ್
ಕೇವಲ ಒಂದೇ ಓವರ್ನಲ್ಲಿ ಇಬ್ಬರ ವಿಕೆಟ್ ಪಡೆದ ಜಡೇಜಾ, ಮೊದಲ ಇನ್ನಿಂಗ್ಸ್ನಲ್ಲೇ ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಸಿಎಸ್ಕೆಗೆ ಪರೋಕ್ಷ ಎಚ್ಚರಿಕೆ ನೀಡಿದರು. ಜೋಫ್ರಾ ಆರ್ಚರ್, ನಂದ್ರೆ ಬರ್ಗರ್ ತಲಾ ಎರಡು, ಬ್ರಿಜೇಶ್ ಶರ್ಮ ಮತ್ತು ಸಂದೀಪ್ ಶರ್ಮ, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ಗಳನ್ನು ಪಡೆಯುವ ಮೂಲಕ ತಂಡದ ಪರ ಮಿಂಚಿದರು.