- ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯ
- ಈ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಭಿಮಾನಿಗಳ ಪ್ರಾರ್ಥನೆ
CSK Fans: ಇಂದು (ಮೇ.17) ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 19ನೇ ಆವೃತ್ತಿಯ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಗೆಲುವಿಗಾಗಿ ಸೆಣಸಲಿದೆ. ಆದರೆ, ಎರಡು ಫ್ರಾಂಚೈಸಿಗಳ ನಡುವಿನ ಮ್ಯಾಚ್ನಲ್ಲಿ ಸಿಎಸ್‌ಕೆ ಅಭಿಮಾನಿಗಳು ಮೂಗು ತೂರಿಸಿರುವುದು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಗೊಂದಲ ಮೂಡಿಸಿದೆ.
ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಜಿದ್ದಾಜಿದ್ದಿ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಐಪಿಎಲ್ ಇತಿಹಾಸದಲ್ಲಿ, ಈ ಎರಡೂ ತಂಡಗಳ ನಡುವಿನ ಪಂದ್ಯವು ಒಂದು ಸಮರವೇ ಸರಿ. ಎರಡು ಬಲಿಷ್ಠ ಫ್ರಾಂಚೈಸಿಗಳ ಅಭಿಮಾನಿಗಳು ಮಾತ್ರ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆಯುವ ಮೂಲಕ ಕಿಡಿಕಾರುತ್ತಿರುತ್ತಾರೆ. ಆ ಮಟ್ಟಿಗಿನ ವೈರತ್ವ ತೋರುತ್ತಾರೆ. ಇನ್ನು ಟ್ರೋಲ್‌ಗಳ ಬಗ್ಗೆ ಕೇಳಬೇಕಾ? ಆರ್‌ಸಿಬಿ ಅಥವಾ ಸಿಎಸ್‌ಕೆ ಯಾರೇ ಪಂದ್ಯ ಸೋತರೆ, ಮರುದಿನವೇ ಜಾಲತಾಣಗಳಲ್ಲಿ ಟೀಕೆ, ವ್ಯಂಗ್ಯಗಳು ಹರಿದಾಡುತ್ತೆ. ಆದರೆ, ಅಚ್ಚರಿ ಎಂಬಂತೆ ಸಿಎಸ್‌ಕೆ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲಬೇಕೆಂದು ಬಯಸಿದೆ.
ಪ್ರತಿ ಪಂದ್ಯದಲ್ಲಿ ಆರ್‌ಸಿಬಿ ನೀಡುತ್ತಿರುವ ಅದ್ಭುತ ಆಲ್ರೌಂಡ್ ಪ್ರದರ್ಶನವನ್ನು ಮೆಚ್ಚಿ ಸಿಎಸ್‌ಕೆ ಇಷ್ಟೊಂದು ಸಪೋರ್ಟ್ ಮಾಡುತ್ತಿಲ್ಲ. ಬದಲಿಗೆ ಅವರ ಉದ್ದೇಶ ಇಷ್ಟೇ. ಇಂದಿನ ನಿರ್ಣಾಯಕ ಮ್ಯಾಚ್ನಲ್ಲಿ ಏನಾದರೂ ಪಂಜಾಬ್ ಕಿಂಗ್ಸ್ ಸೋತರೆ, ತಮ್ಮ ತಂಡಕ್ಕೆ ಪ್ಲೇಆಫ್ಗೆ ಎಂಟ್ರಿ ಕೊಡುವ ಅವಕಾಶ ಸಿಗುತ್ತದೆ. ಅಕಸ್ಮಾತ್ ಆರ್‌ಸಿಬಿ ಸೋಲುಂಡರೆ, ತಮ್ಮ ಪ್ಲೇಆಫ್ ಕನಸು ಛಿದ್ರವಾಗಲಿದೆ ಎಂಬುದು ಅವರ ಲೆಕ್ಕಾಚಾರ. ಹೀಗಾಗಿ, ರಜತ್ ಪಡೆ ಗೆಲ್ಲಲಿ ಎಂದು ಕಾದು ಕುಳಿತ್ತಿದ್ದಾರೆ.
ಈ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ನಾಲ್ಕು ತಂಡಗಳ ಪೈಕಿ ಎರಡು ತಂಡಗಳಿಗೆ ಅಗ್ರ ಮೂರು ಅಥವಾ ನಾಲ್ಕನೇ ಸ್ಥಾನಕ್ಕೇರಲು ಅವಕಾಶ ಸಿಗುತ್ತದೆ. ಪಂಜಾಬ್ ಕಿಂಗ್ಸ್ ರಜತ್ ಪಾಟೀದಾರ್ ಪಡೆ ಎದುರು ಹೀನಾಯ ಸೋಲು ಅನುಭವಿಸಲಿ ಎಂದು ಸಿಎಸ್‌ಕೆ ಅಭಿಮಾನಿಗಳು ಕುಳಿತ ಜಾಗದಿಂದಲೇ ಬೇಡಿಕೊಳ್ಳುತ್ತಿದ್ದಾರೆ. ಅತ್ತ ಧೋನಿಯೂ ಇಲ್ಲ, ಇತ್ತ ಗೆಲ್ಲುವ ಪಂದ್ಯವನ್ನು ಸೋಲುವ ಚೆನ್ನೈ ತಂಡಕ್ಕೆ ಫ್ಯಾನ್ಸ್ಗಳ ಕ್ರೇಜ್ ನಿಜಕ್ಕೂ ಅರ್ಥವಾಗದು,(ಏಜೆನ್ಸೀಸ್).