ಸಿಎಸ್​ಕೆ ಕ್ರಿಕೆಟಿಗರ ಪುನರ್ಮಿಲನ; ನಿರೀಕ್ಷೆಯಂತೆ ಬರಲಿಲ್ಲ ಜನ! 
ಕ್ರಿಕೆಟ್

ಸಿಎಸ್​ಕೆ ಕ್ರಿಕೆಟಿಗರ ಪುನರ್ಮಿಲನ; ನಿರೀಕ್ಷೆಯಂತೆ ಬರಲಿಲ್ಲ ಜನ!

ಚೆನ್ನೈ: ಆರ್​ಸಿಬಿ ತಂಡದ "ಅನ್​ಬಾಕ್ಸ್​' ಕಾರ್ಯಕ್ರಮದ ಮಾದರಿಯಲ್ಲಿ ಐದು ಬಾರಿಯ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ (chennai superkings) ತಂಡ ಭಾನುವಾರ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ "ರೋರ್​ 26' ಹೆಸರಿನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಇದರಲ್ಲಿ ಹಾಲಿ ಆಟಗಾರರೊಂದಿಗೆ ಸಿಎಸ್​ಕೆ ತಂಡದ ಮಾಜಿ ಆಟಗಾರರೂ ಭಾಗವಹಿಸಿ ಅಭಿಮಾನಿಗಳಿಗೆ ಮುದ ನೀಡಿದರು.

ಸಿಎಸ್​ಕೆ ತಂಡದ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್​, ಮೈಕೆಲ್​ ಹಸ್ಸೆ, ಡ್ವೇನ್​ ಬ್ರಾವೊ, ಮುತ್ತಯ್ಯ ಮುರಳೀಧರನ್​, ಹರ್ಭಜನ್​ ಸಿಂಗ್​, ಮುರಳಿ ವಿಜಯ್​, ಸುರೇಶ್​ ರೈನಾ, ಪಾರ್ಥಿವ್​ ಪಟೇಲ್​ ಮತ್ತು ಎಸ್​. ಬದರೀನಾಥ್​ ಮತ್ತೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಂಡರು ಮತ್ತು ಹಾಲಿ ಆಟಗಾರರೊಂದಿಗೆ ಆಡಿ ಸಂಭ್ರಮಿಸಿದರು.

ಮಾಜಿ ನಾಯಕ ಎಂಎಸ್​ ಧೋನಿ (MS Dhoni) ತಂಡದ ಹೊಸ ಸದಸ್ಯ ಸಂಜು ಸ್ಯಾಮ್ಸನ್​ ಅವರಿಗೆ ಸ್ಮರಣಿಕೆ ನೀಡಿ ವಿಶೇಷವಾಗಿ ಸ್ವಾಗತಿಸಿದರು. ಟಿ20 ವಿಶ್ವಕಪ್​ ವಿಜೇತ ಶಿವಂ ದುಬೆ ಮತ್ತು 19 ವಯೋಮಿತಿ ವಿಶ್ವಕಪ್​ ವಿಜೇತ ತಂಡದ ನಾಯಕ ಆಯುಷ್​ ಮಹಾತ್ರೆಗೂ ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಸುರೇಶ್​ ರೈನಾ ಮತ್ತು ಮ್ಯಾಥ್ಯೂ ಹೇಡನ್​ ಅವರನ್ನು ಸಿಎಸ್​ಕೆ ತಂಡದ ಹಾಲ್​ ಆಫ್​ ಫೇಮ್​ಗೆ ಸೇರ್ಪಡೆಗೊಳಿಸಲಾಯಿತು.

ಇದೇ ವೇಳೆ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಕಾರ್ಯಕ್ರಮಕ್ಕೆ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಿರಲಿಲ್ಲ. ಭಾನುವಾರದಂದು ಸಮಾರಂಭ ಆಯೋಜಿಸಿದರೂ, ಸಿಎಸ್​ಕೆ ಫ್ರಾಂಚೈಸಿ ನಿರೀಕ್ಷಿಸಿದಷ್ಟು ಜನ ಸ್ಟೇಡಿಯಂಗೆ ಆಗಮಿಸಲಿಲ್ಲ.

ಸಿಎಸ್​ಕೆ ತಂಡ ಮಾರ್ಚ್​ 30ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಆಡುವ ಮೂಲಕ ಐಪಿಎಲ್​ 19ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿದೆ.