13 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಉರ್ವಿಲ್ ಪಟೇಲ್
CSK vs LSG: ಇಂದು (ಮೇ.10) ಚೆನ್ನೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್ಕೆ ಮತ್ತು ಎಲ್ಎಸ್ಜಿ ನಡುವಿನ ಪಂದ್ಯದಲ್ಲಿ ಚೆನ್ನೈ ಪರ ಯುವ ಬ್ಯಾಟರ್ ಉರ್ವಿಲ್ ಪಟೇಲ್ ಅತಿ ವೇಗದ ಅರ್ಧಶತಕ ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ ದಾಖಲೆಯನ್ನು ಸರಿಗಟ್ಟಿದರು.
204 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಆರಂಭಿಕ ಹಂತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಹೋಯಿತು. ಸ್ಯಾಮ್ಸನ್ ಪೆವಿಲಿಯನ್ಗೆ ಹೋಗ್ತಿದ್ದಂತೆ ಕ್ರೀಸ್ಗಿಳಿದ ಉರ್ವಿಲ್ ಪಟೇಲ್, ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳ ಸುರಿಮಳೆಗೈದರು. ಇದರ ಸಹಾಯದಿಂದ ಕೇವಲ 13 ಬಾಲ್ನಲ್ಲಿ 50 ರನ್ ಗಳಿಸಿ, ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದರು.
ಈ ಮೊದಲು 13 ಎಸೆತಕ್ಕೆ ಅರ್ಧಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಜೊತೆಗೆ ಈ ಅಪರೂಪದ ದಾಖಲೆಯನ್ನು ಉರ್ವಿಲ್ ಹಂಚಿಕೊಳ್ಳಲಿದ್ದಾರೆ. 2014ರಲ್ಲಿ ಪಂಜಾಬ್ ಕಿಂಗ್ಸ್ ಎದುರು ಸುರೇಶ್ ರೈನಾ 16 ಬಾಲ್ನಲ್ಲಿ 50 ರನ್ ಸಿಡಿಸಿದ್ದರು. ಈ ದಾಖಲೆಯನ್ನು ಉರ್ವಿಲ್ ಮುರಿದ್ದಿದ್ದಾರೆ. ಇಷ್ಟಲ್ಲದೇ, ಆರ್ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿಡಿ ಅವರ ರೆಕಾರ್ಡ್ ಅನ್ನು ಸಿಎಸ್ಕೆ ತಂಡದ ಯುವ ಬ್ಯಾಟರ್ ಬ್ರೇಕ್ ಮಾಡಿದ್ದಾರೆ.
ಆಡಿದ ಮೊದಲ 10 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಉರ್ವಿಲ್, ಐಪಿಎಲ್ ಇತಿಹಾಸದಲ್ಲಿ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟಕ್ಕೂ, ಯಾರೆಲ್ಲ ಅತಿ ವೇಗದ ಅರ್ಧಶತಕ ಮತ್ತು 10 ಬಾಲ್ಗಳಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರು ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಅತಿ ವೇಗದ ಐಪಿಎಲ್ ಅರ್ಧಶಧಕ
1. ಯಶಸ್ವಿ ಜೈಸ್ವಾಲ್ (13 ಎಸೆತ) ಆರ್ಆರ್ vs ಕೆಕೆಆರ್, ಕೋಲ್ಕತ, 2023
2. ಉರ್ವಿಲ್ ಪಟೇಲ್ (13 ಎಸೆತ) ಸಿಎಸ್ಕೆ vs ಎಲ್ಎಸ್ಜಿ, ಚೆನ್ನೈ, 2026
3. ಕೆಎಲ್ ರಾಹುಲ್ (14 ಎಸೆತ) ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ, 2018
4. ಪ್ಯಾಟ್ ಕಮ್ಮಿನ್ಸ್ (14 ಎಸೆತ) ಕೆಕೆಆರ್ vs ಎಂಐ, ಪುಣೆ, 2022
5. ರೊಮಾರಿಯೊ ಶೆಫರ್ಡ್ (14 ಎಸೆತ) ಆರ್ಸಿಬಿ vs ಸಿಎಸ್ಕೆ, ಬೆಂಗಳೂರು, 2025
ಮೊದಲ 10 ಎಸೆತಗಳಲ್ಲಿ ಅತಿ ಹೆಚ್ಚು ಸ್ಕೋರ್
42 ರನ್, ಉರ್ವಿಲ್ ಪಟೇಲ್, ಚೆನ್ನೈ, 2026
41 ರನ್, ಎಬಿ ಡಿವಿಲಿಯರ್ಸ್, ಬೆಂಗಳೂರು, 2015
41 ರನ್, ಯಶಸ್ವಿ ಜೈಸ್ವಾಲ್, ಕೋಲ್ಕತ, 2023
40 ರನ್, ಅಭಿಷೇಕ್ ಶರ್ಮಾ, ದೆಹಲಿ, 2024
39 ರನ್, ರೊಮಾರಿಯೊ ಶೆಫರ್ಡ್, ಮುಂಬೈ, 2024
39 ರನ್, ಪ್ರಿಯಾಂಶ್ ಆರ್ಯ, ಚೆನ್ನೈ, 2026