ಒಲಿಂಪಿಕ್ಸ್ ಟಿ20 ಕ್ರಿಕೆಟ್ ಅರ್ಹತೆ ಮಾನದಂಡ ಪ್ರಕಟಿಸಿದ ಐಸಿಸಿ: ಭಾರತ ಮಹಿಳೆಯರಿಗೆ ಪ್ರವೇಶ ಖಚಿತ; ಪುರುಷರಿಗೂ ಬಹುತೇಕ ಖಾತ್ರಿ!
ನವದೆಹಲಿ: ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದ (Los Angeles Olympics) ಟಿ20 ಕ್ರಿಕೆಟ್ ಸ್ಪರ್ಧೆಗೆ ಅರ್ಹತಾ ಮಾನದಂಡವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಇದರನ್ವಯ ಪುರುಷರಿಗೆ ಐಸಿಸಿ ರ್ಯಾಂಕಿಂಗ್ ಆಧಾರದಲ್ಲಿ ಮತ್ತು ಮಹಿಳೆಯರಿಗೆ ಹಾಲಿ ಟಿ20 ವಿಶ್ವಕಪ್ ಟೂರ್ನಿಯ ಸ್ಥಾನದ ಆಧಾರದಲ್ಲಿ ಅರ್ಹತೆ ಒಲಿಯಲಿದೆ. ಇದರಿಂದ ಭಾರತದ ಮಹಿಳಾ ತಂಡ ವಿಶ್ವಕಪ್ನಲ್ಲಿ ಅತ್ಯುನ್ನತ ಸ್ಥಾನ ಪಡೆದ ಏಷ್ಯಾದ ತಂಡವಾಗಿ ಅರ್ಹತೆ ಗಳಿಸಿದ್ದರೆ, ಪುರುಷರ ತಂಡ ಹಾಲಿ ವರ್ಷಾಂತ್ಯದವರೆಗೂ ಏಷ್ಯಾದ ನಂ. 1 ಪಟ್ಟ ಕಾಯ್ದುಕೊಂಡರೆ ಒಲಿಂಪಿಕ್ಸ್ ಟಿಕೆಟ್ ಒಲಿಸಿಕೊಳ್ಳುವ ಅವಕಾಶ ಹೊಂದಿದೆ.
ಮಹಿಳಾ ವಿಭಾಗದಲ್ಲಿ ಭಾರತದೊಂದಿಗೆ ಆಸ್ಟ್ರೆಲಿಯಾ, ಬ್ರಿಟನ್ (ಇಂಗ್ಲೆಂಡ್), ದಣ ಆಫ್ರಿಕಾ ತಂಡಗಳು ಏಷ್ಯಾ, ಒಶಿಯಾನಿಯಾ, ಯುರೋಪ್ ಮತ್ತು ಆಫ್ರಿಕಾದ ಅಗ್ರ ತಂಡಗಳಾಗಿ ಅರ್ಹತೆ ಗಳಿಸಿವೆ. ಭಾರತ ಮಹಿಳಾ ತಂಡ ಸೆಮಿಫೈನಲ್ಗೇರಲು ವಿಫಲವಾದ ನಡುವೆಯೂ ಒಲಿಂಪಿಕ್ಸ್ ಅರ್ಹತೆ ಒಲಿಸಿಕೊಂಡಿರುವುದು ಗಮನಾರ್ಹವೆನಿಸಿದೆ.
ಪುರುಷರ ವಿಭಾಗದಲ್ಲಿ ಐಸಿಸಿ ರ್ಯಾಂಕಿಂಗ್ನಲ್ಲಿ ಪ್ರತಿ ಖಂಡದ ಅಗ್ರ ತಂಡಕ್ಕೆ ಒಲಿಂಪಿಕ್ಸ್ ಅರ್ಹತೆ ನೀಡಲಾಗುತ್ತದೆ. ಇದಕ್ಕೆ ಅಂತಿಮ ಗುಡುವು ಡಿಸೆಂಬರ್ 31 ಆಗಿದೆ. ಭಾರತ ಪುರುಷರ ತಂಡ ಐಸಿಸಿ ರ್ಯಾಂಕಿಂಗ್ನಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, 6ನೇ ಸ್ಥಾನದಲ್ಲಿರುವ ಪಾಕಿಸ್ತಾನ ಸಮೀಪದಲ್ಲಿರುವ ಏಷ್ಯಾದ ತಂಡವಾಗಿದೆ. ಭಾರತ-ಪಾಕ್ ನಡುವೆ 32 ಅಂಕಗಳ ಅಂತರವಿದೆ. ಹೀಗಾಗಿ ಪುರುಷರ ವಿಭಾಗದಲ್ಲೂ ಭಾರತಕ್ಕೆ ಒಲಿಂಪಿಕ್ಸ್ ಅರ್ಹತೆ ಬಹುತೇಕ ಖಚಿತ ಎನ್ನಬಹುದು.
ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ 6ನೇ ತಂಡವನ್ನು ಗ್ಲೋಬಲ್ ಅರ್ಹತಾ ಟೂರ್ನಿಯ ಮೂಲಕ ಆರಿಸಲಾಗುತ್ತದೆ. ಇದರಲ್ಲಿ ಐಸಿಸಿ ರ್ಯಾಂಕಿಂಗ್ನಲ್ಲಿ, ಮೊದಲೇ ಅರ್ಹತೆ ಪಡೆದಿರದ ಅಗ್ರ 8 ತಂಡಗಳು ಭಾಗವಹಿಸಲಿವೆ. ಇದರಲ್ಲಿ ಒಂದು ಖಂಡದಿಂದ ಇಷ್ಟೇ ತಂಡ ಭಾಗವಹಿಸಬೇಕು ಎಂಬ ಮಿತಿ ಇರುವುದಿಲ್ಲ.
ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ತಲಾ 6 ತಂಡಗಳು ಒಲಿಂಪಿಕ್ಸ್ ಪದಕ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಈ 6 ತಂಡಗಳನ್ನು ತಲಾ 3ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಗುಂಪಿನ ರೌಂಡ್ ರಾಬಿನ್ ಬಳಿಕ ಇನ್ನೊಂದು ಗುಂಪಿನಲ್ಲಿರುವ, ಸಮಾನ ಸ್ಥಾನ ಪಡೆದಿರದ 2 ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಅಂತಿಮವಾಗಿ ಅಗ್ರ 2 ತಂಡಗಳು ಸ್ವರ್ಣ ಪದಕಕ್ಕೆ ಸೆಣಸಲಿವೆ. 3-4ನೇ ಸ್ಥಾನಿ ತಂಡಗಳು ಕಂಚಿಗೆ ಹೋರಾಡಲಿವೆ. ಪದಕ ಸ್ಪರ್ಧೆಗೆ ಮುನ್ನ ಎಲ್ಲ ತಂಡಗಳಿಗೆ ತಲಾ 4 ಪಂದ್ಯ ಆಡುವ ಅವಕಾಶ ಲಭಿಸಲಿದೆ. ಪುರುಷ-ಮಹಿಳಾ ವಿಭಾಗದಲ್ಲಿ ತಲಾ 14 ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ತಿಳಿಸಿದೆ.
ಆತಿಥೇಯ ಅಮೆರಿಕದ ತಂಡಗಳು ಪುರುಷ-ಮಹಿಳಾ ವಿಭಾಗದ ಐಸಿಸಿ ರ್ಯಾಂಕಿಂಗ್ನಲ್ಲಿ ಡಿ.31ರ ವೇಳೆಗೆ ಅಗ್ರ 15ರೊಳಗಿದ್ದರೆ ಮಾತ್ರ ನೇರಪ್ರವೇಶ ನೀಡಲಾಗುತ್ತದೆ ಎಂದು ಐಸಿಸಿ ಷರತ್ತು ವಿಧಿಸಿದೆ. ಅಮೆರಿಕ ಪುರುಷರ ತಂಡ ಸದ್ಯ 13ನೇ ಸ್ಥಾನದಲ್ಲಿದ್ದರೆ, ಮಹಿಳಾ ತಂಡ 20ನೇ ಸ್ಥಾನದಲ್ಲಿದೆ. ಹೀಗಾಗಿ ಮಹಿಳೆಯರು ಇನ್ನೂ 5 ಸ್ಥಾನ ಬಡ್ತಿ ಪಡೆದರಷ್ಟೇ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಹಾಲಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಿದೆ. ಆದರೆ ಇದು ಕ್ರಿಕೆಟ್ನಲ್ಲಿ ಕೆರಿಬಿಯನ್ ದ್ವೀಪರಾಷ್ಟ್ರಗಳ ಸಮೂಹ ತಂಡವಾಗಿ ಭಾಗವಹಿಸಿದರೆ, ಒಲಿಂಪಿಕ್ಸ್ನಲ್ಲಿ ದೇಶದ ತಂಡಗಳಿಗಷ್ಟೇ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡವಾಗಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದರಿಂದ ಐಸಿಸಿಯು, ಆಂಟಿಗಾ, ಜಮೈಕಾ, ಗ್ರೆನೇಡ, ಗಯಾನಾ, ಸೇಂಟ್ ಕಿಟ್ಸ್, ಬಾರ್ಬಡೋಸ್ ಸೇರಿದಂತೆ ಕೆರಿಬಿಯನ್ ದ್ವೀಪರಾಷ್ಟ್ರಗಳಿಗೆ ಪ್ರತ್ಯೇಕ ಅರ್ಹತಾ ಟೂರ್ನಿಯನ್ನು ಆಯೋಜಿಸಲಿದೆ. ಇದರಲ್ಲಿ ಗೆದ್ದ ಗ್ಲೋಬಲ್ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸಬೇಕಾಗುತ್ತದೆ. ಪುರುಷರ ವಿಭಾಗದಲ್ಲೂ ವೆಸ್ಟ್ ಇಂಡೀಸ್ ಐಸಿಸಿ ರ್ಯಾಂಕಿಂಗ್ನ ಅಗ್ರ 8 ತಂಡಗಳಲ್ಲಿ ಒಂದಾಗಿದ್ದರೆ, ಗ್ಲೋಬಲ್ ಅರ್ಹತಾ ಟೂರ್ನಿಗೆ ಕೆರಿಬಿಯನ್ ಅರ್ಹತಾ ಟೂರ್ನಿಯಿಂದ ತನ್ನ ಪ್ರತಿನಿಧಿಯನ್ನು ಆರಿಸಬಹುದಾಗಿದೆ.