ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್
- ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ
- ಸೋಲಿನ ಬಳಿಕ ಪಾಕಿಸ್ತಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ
- ಪಿಸಿಬಿ ಅಧ್ಯಕ್ಷ ನಖ್ವಿ ವಿರುದ್ಧ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಗರಂ
ಪಾಕಿಸ್ತಾನ: ಭಾನುವಾರ (ಫೆ.15) ರಂದು ನಡೆದ ಟಿ20 ವಿಶ್ವ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಕ್ರಿಕೆಟ್ ಸೋಲಿನ ನಂತರ ಪಾಕಿಸ್ತಾನದ ಅಧಿಕಾರಿಗಳ ವಲಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಭಾರತದ ವಿರುದ್ಧ ಹೀನಾಯವಾಗಿ ಸೋತ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು ಪಾಕಿಸ್ತಾನ ಸೂಪರ್ ಲೀಗ್ (PSL) ಪತ್ರಿಕಾಗೋಷ್ಠಿಯಲ್ಲಿ ನಖ್ವಿ, ಭಾರತದೊಂದಿಗೆ ಪಂದ್ಯದ ಬಗ್ಗೆ ಕೇಳಿದ್ದಾಗ, ಐಸಿಸಿ ಯ ಬೆದರಿಕೆಗಳಿಕೆ ನಾವು (ಪಿಸಿಬಿ) ಮತ್ತು ನಮ್ಮ ದೇಶ (ಪಾಕಿಸ್ತಾನ) ಎಂದಿಗೂ ಹೆದರುವುದಿಲ್ಲ, ನಮ್ಮ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಈ ರೀತಿಯ ಬೆದರಿಕೆಗಳಿಗೆ ಹೆದರುವ ಜಾಯಮಾನದವರಲ್ಲ ಎಂದು ಹೇಳಿದ್ದರು.
ಇವರ ಹೇಳಿಕೆ ಪಾಕಿಸ್ತಾನದ ಪರವಾಗಿದ್ದರೂ ಸಹ, ಇವರು ಸೇನೆಯ ಪೂರ್ವಾನುಮತಿ ಪಡೆಯದೆ ಹೇಳಿಕೆ ನೀಡಿದ್ದು, ಅಸಿಮ್ ಮುನೀರ್ ಕೋಪಕ್ಕೆ ಕಾರಣವಾಗಿತ್ತು. ಕ್ರೀಡೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯವನ್ನು ಏಳೆದುತರುವ ಅವಶ್ಯಕತೆ ಏನಿತ್ತು ಎನ್ನುವುದು ಅಸಿಮ್ ಮುನೀರ್ ಅವರ ವಾದವಾಗಿತ್ತು.
ಈಹ ಪಾಕಿಸ್ತಾನ ತನ್ನ ಬದ್ಧ ವೈರಿ ಭಾರತದ ವಿರುದ್ಧ ಸೋಲನ್ನು ಕಂಡಿರುವುದರಿಂದ ಈ ವಿಷಯ ತೀವ್ರ ಸ್ವರೂಪ ಪಡೆದಯಲಿದೆ ಎಂದು ಹೇಳಲಾಗುತ್ತಿದೆ. ಭಾರತದೊಂದಿಗಿನ ಕ್ರಿಕೆಟ್ ಪಂದ್ಯವನ್ನು ಕೇವಲ ಕ್ರೀಡೆಯಾಗಿ ನೋಡದ ಪಾಕಿಸ್ತಾನಿಯರು, ಇದನ್ನು ರಾಷ್ಟ್ರೀಯ ಪ್ರತಿಷ್ಠೆ ಮತ್ತು ಭೌಗೋಳಿಕ ರಾಜಕೀಯದ ಭಾಗದಂತೆ ನೋಡಲಾಗುತ್ತದೆ.
ಈ ಸೋಲಿನ ಬಳಿಕ ಆಸಿಮ್ ಮುನೀರ್, ಮಿಲಿಟರಿ ಕಾರ್ಯದರ್ಶಿ ಮೂಲಕ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪಿಸಿಬಿ ಕುರಿತು ತಮ್ಮ ಕಳವಳಗಳನ್ನು ತಿಳಿಸಿದ್ದು, ಸದ್ಯದಲ್ಲೇ ಪಿಸಿಬಿಯಲ್ಲಿ ಭಾರಿ ಬದಲಾವಣೆ ನಡೆಯಲಿದೆ ಎಂಬ ವದಂತಿ ಕೇಳಿಬರುತ್ತಿದೆ.
ನಖ್ವಿ ವಿರುದ್ಧ ಅಖ್ತರ್ ಗರಂ
ಇದರ ನಡುವೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ನಖ್ವಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನಖ್ವಿಯೊಬ್ಬ ಅಸಮರ್ಥ ಮತ್ತು ಅವಿದ್ಯಾವಂತ ಎಂದು ಕರೆದಿದ್ದಾರೆ. ಕ್ರಿಕೆಟ್ ಬಗ್ಗೆ ಗಂಧ-ಗಾಳಿ ತಿಳಿಯದ ವ್ಯಕ್ತಿಯನ್ನು ಪಿಸಿಬಿ ಅಧ್ಯಕ್ಷನಾಗಿ ಮಾಡಲಾಗಿದೆ, ಇಂತಹ ಅಸಮರ್ಥ ವ್ಯಕ್ತಿ ಇದ್ದರೆ ತಂಡ ಹೇಗೆ ಜಯಶಾಲಿಯಾಗಲಿದೆ? ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜನ್ಸೀಸ್).