ರನೌಟ್ ತೀರ್ಪು ಕೊಟ್ಟಿದ್ದಕ್ಕೆ ಅಂಪೈರ್‌ಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ಯುವಕ! Cricket Umpire
- ಅಂಪೈರ್ ನೀಡಿದ ರನೌಟ್ ತೀರ್ಪೊಂದು ಅವರನ್ನೇ ಬಲಿ ಪಡೆದುಕೊಂಡಿದೆ
- ಈ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ
- ಕೊಲೆಯಾದ ಅಂಪೈರ್ನನ್ನು ಡೋಲಾ ಅಜಿತ್ ಬಾಬು ಎಂದು ಗುರುತಿಸಲಾಗಿದೆ
Cricket Umpire : ಅಂಪೈರ್ ನೀಡಿದ ರನೌಟ್ ತೀರ್ಪೊಂದು ಅವರನ್ನೇ ಬಲಿ ಪಡೆದುಕೊಂಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಪಂದ್ಯದ ವೇಳೆ 21 ವರ್ಷದ ಕ್ರಿಕೆಟ್ ಅಂಪೈರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ.
ಎನ್ಡಿಟಿವಿ ವರದಿಯ ಪ್ರಕಾರ, ಕೊಲೆಯಾದ ಅಂಪೈರ್ನನ್ನು ಡೋಲಾ ಅಜಿತ್ ಬಾಬು ಎಂದು ಗುರುತಿಸಲಾಗಿದೆ. ಭಾನುವಾರ (ಏಪ್ರಿಲ್ 05) ತಮ್ಮ ಸಹ ಅಂಪೈರ್ ಬುಡುಮುರಿ ಚಿರಂಜೀವಿ ಅವರೊಂದಿಗೆ ಸ್ಥಳೀಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಮೂರು ತಂಡಗಳನ್ನು ಒಳಗೊಂಡ ಪಂದ್ಯಕ್ಕೆ ಅಜಿತ್ ಅಂಪೈರ್ ಆಗಿದ್ದರು. ಪಂದ್ಯದ ಸಮಯದಲ್ಲಿ, ರನೌಟ್ ವಿಚಾರವಾಗಿ ಎರಡು ತಂಡಗಳ ಆಟಗಾರರ ನಡುವೆ ವಾಗ್ವಾದ ನಡೆಯಿತು. ಇದನ್ನು ಇಬ್ಬರು ಅಂಪೈರ್‌ಗಳು ಮೈದಾನದಲ್ಲಿಯೇ ಪರಿಹರಿಸಿದರು.
ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ, ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ 26 ವರ್ಷದ ಕಾಂತ ಕಿಶೋರ್ ಕೋಪಗೊಂಡರು. ಬಳಿಕ ಅಂಪೈರ್‌ಗಳು ಮತ್ತು ಆಟಗಾರರನ್ನು ನಿಂದಿಸಲು ಪ್ರಾರಂಭಿಸಿದರು. ಇದರಿಂದ ಆಟದ ಸ್ಥಳದಲ್ಲಿ ಪರಿಸ್ಥಿತಿ ಹಿಂಸೆಗೆ ತಿರುಗಿತು. ಪಂದ್ಯದ ನಂತರ ಕಿಶೋರ್, ಇಬ್ಬರು ಅಂಪೈರ್‌ಗಳನ್ನು ಮಾತನಾಡಲು ಕರೆದರು. ಹೀಗಾಗಿ, ಅಜಿತ್ ಬಾಬು, ಚಿರಂಜೀವಿ ಮತ್ತು ಇತರ ಕೆಲವು ಸ್ನೇಹಿತರು ಕಿಶೋರ್ ಬಳಿಗೆ ಹೋದರು. ತಕ್ಷಣ, ಮತ್ತೊಂದು ಸುತ್ತಿನ ವಾಗ್ವಾದ ನಡೆಯಿತು. ಈ ವೇಳೆ ಕಿಶೋರ್, ಇದ್ದಕ್ಕಿದ್ದಂತೆ ಚಾಕು ತೆಗೆದು ಇಬ್ಬರು ಅಂಪೈರ್‌ಗಳ ಮೇಲೆ ಹಲ್ಲೆ ನಡೆಸಿದರು ಎಂದು ವಿಶಾಖಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲೇಶ್ವರ ರಾವ್ ಹೇಳಿದರು.
ಈ ದಾಳಿಯಲ್ಲಿ, ಅಜಿತ್ ಬಾಬು ಎದೆಗೆ ಚಾಕು ಇರಿದಿದ್ದರಿಂದ ಸ್ಥಳದಲ್ಲೇ ಕುಸಿದುಬಿದ್ದರು. ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಚಿರಂಜೀವಿಗೂ ಚಾಕು ಇರಿಯಲಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಬಳಲುತ್ತಿದ್ದರು. ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಅಜಿತ್ ಬಾಬು ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ, ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅಜಿತ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ಮತ್ತೊಬ್ಬ ಅಂಪೈರ್ ಚಿರಂಜೀವಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಂದ್ಯದಲ್ಲಿ ಆಟಗಾರನಲ್ಲದ ವ್ಯಕ್ತಿಯಿಂದ ಈ ದಾಳಿ ನಡೆದಿದ್ದು, ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೃತ ಅಜಿತ್ ಅವರ ಸಹೋದರ ಆರೋಪಿಸಿದ್ದಾರೆ. ಆರೋಪಿ ಕಿಶೋರ್ ಪಕ್ಕದ ಕಾಲೋನಿಯ ವಿನಾಯಕ ನಗರದ ನಿವಾಸಿಯಾಗಿದ್ದು, ತನ್ನಷ್ಟಕ್ಕೆ ತಾನು ವಿವಾದದಲ್ಲಿ ಮಧ್ಯಪ್ರವೇಶಿಸಿ, ಅಂಪೈರ್‌ಗಳನ್ನು ನಿಂದಿಸಿ, ಕೊನೆಗೆ ಪಾನಮತ್ತ ಸ್ಥಿತಿಯಲ್ಲಿ ಬಂದು ಕೊಲೆ ಮಾಡಿದ್ದಾನೆ. ರನೌಟ್ ವಿವಾದ ಅಷ್ಟರಲ್ಲಾಗಲೇ ಬಗೆಹರಿದಿತ್ತು. ಆದರೆ, ಕಿಶೋರ್ ವಿವಾದದಲ್ಲಿ ಮಧ್ಯಪ್ರವೇಶಿಸಿ, ಅವರನ್ನು ನಿಂದಿಸಿ, ನಂತರ ಕುಡಿದು ಬಂದು ಅವರನ್ನು ಕೊಂದಿದ್ದಾರೆ ಅಜಿತ್ ಸಹೋದರ ಆರೋಪಿಸಿದ್ದಾರೆ.
ಮೃತನ ತಂದೆ ಡೋಲಾ ಅಪ್ಪಲ ರಾಜು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ, (ಏಜೆನ್ಸೀಸ್).