ಟೀಮ್ ಇಂಡಿಯಾ ಬ್ಯಾಟರ್ ಅಭಿಷೇಕ್ ಶರ್ಮ
Abhishek Sharma: ಇಂದು (ಮಾ.05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಭಾರತ 7 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಕೊನೆಯ ಓವರ್ವರೆಗೂ ತಲುಪಿದ ಮ್ಯಾಚ್ನಲ್ಲಿ ಕಡೆಗೂ ಆಂಗ್ಲರ ವಿಶ್ವಕಪ್ ಫೈನಲ್ ಆಸೆಯನ್ನು ಮುರಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು. ಇದು ಭಾರತೀಯ ಕ್ರಿಕೆಟ್ ಪ್ರಿಯರಿಗೆ ಎಲ್ಲಿಲ್ಲದ ಸಂತಸ ನೀಡಿದ್ದೇ ಆದರೂ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಮಾಡಿದ ಮತ್ತದೇ ಎಡವಟ್ಟನ್ನು ಸಹಿಸಲಾಗದೆ ಕೆಂಡಕಾರುತ್ತಿದ್ದಾರೆ.
ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಮತ್ತದೇ ಕಳಪೆ ಪ್ರದರ್ಶನ ಮುಂದುವರಿಸಿದ ಅಭಿಷೇಕ್ ಶರ್ಮ ವಿರುದ್ಧ ಸದ್ಯ ಕ್ರಿಕೆಟ್ ಪ್ರಿಯರು ತೀವ್ರ ಅಸಮಾಧಾನಗೊಂಡಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಶುರು ಮಾಡಿದ ಟೀಮ್ ಇಂಡಿಯಾಗೆ ಇವತ್ತಾದರೂ ಯುವ ಬ್ಯಾಟರ್ ಅಭಿಷೇಕ್ ಶರ್ಮರಿಂದ ಉತ್ತಮ ಇನ್ನಿಂಗ್ಸ್ ಬರಲಿದೆ ಎಂದೇ ಕ್ರಿಕೆಟ್ ಪ್ರಿಯರು ನಿರೀಕ್ಷಿಸಿದ್ದರು. ಆದರೆ, ಆ ಭರವಸೆಯನ್ನು ಈ ಪಂದ್ಯದಲ್ಲಿಯೂ ಛಿದ್ರಗೊಳಿಸಿದ ಅಭಿಷೇಕ್, ಕೇವಲ 9 ರನ್ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
ಅಭಿಷೇಕ್ ನೀಡಿದ ಕಳಪೆ ಪ್ರದರ್ಶನದಿಂದ ಕೆರಳಿದ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಯುವ ಬ್ಯಾಟರ್ನನ್ನು ಮನಬಂದಂತೆ ಛೀಮಾರಿ ಹಾಕಿದ್ದಾರೆ. ಅಷ್ಟಕ್ಕೂ, ಇದೇ ಮೊದಲಾಗಿದಿದ್ದರೆ ಯಾರಿಗೂ ಬೇಸರವಾಗುತ್ತಿರಲಿಲ್ಲ. ಆದ್ರೆ, ಗ್ರೂಪ್ ಸ್ಟೇಜ್ ಹಂತದ ಮೂರು ಪಂದ್ಯಗಳಲ್ಲಿಯೂ ಸತತ ಡಕ್ಔಟ್ ಆದ ಅಭಿ, ಸೂಪರ್-8 ಮ್ಯಾಚ್ನಲ್ಲೂ ಫ್ಲಾಪ್ ಆದರು. ಇಷ್ಟಾದರೂ ಅವರ ಮೇಲೆ ಅಪಾರ ನಂಬಿಕೆಯಿಟ್ಟು, ಸೆಮೀಫೈನಲ್ ಪಂದ್ಯದಲ್ಲಿ ಆಡಿಸಿದ ಗೌತಮ್ ಗಂಭೀರ್ಗೆ ಇದೀಗ ಮತ್ತೊಮ್ಮೆ ಭಾರೀ ಮುಖಭಂಗವೇ ಉಂಟಾಗಿದೆ.
ಆಡಿದ 7 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ ಅಭಿಷೇಕ್, ಮತ್ತದೇ ಮಿಸ್ಟೇಕ್ ರಿಪೀಟ್ ಮಾಡಿದ್ದನ್ನು ಫ್ಯಾನ್ಸ್ಗಳಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಅಮೆರಿಕ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಶೂನ್ಯಕ್ಕೆ ಔಟ್ ಆದ ಅಭಿ, ಅದರ ನಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 15 ರನ್ ಗಳಿಸಿದರು. ಇನ್ನು ಜಿಂಬಾಬ್ವೆ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಮಾತ್ರ 55 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಆದ್ರೆ, ಇಲ್ಲಿಗಷ್ಟೇ ಸೀಮಿತವಾಯಿತು.
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಅವರು ಕೇವಲ 11 ರನ್ ಗಳಿಸಿದರು. ಸತತವಾಗಿ ಕಳಪೆ ಪ್ರದರ್ಶನ ಮುಂದುವರಿಸಿದ ಅಭಿಷೇಕ್ ಶರ್ಮಗೆ ಸಾಲು ಸಾಲು ಅವಕಾಶಗಳನ್ನು ನೀಡಿದರೂ ಮತ್ತದೇ ತಪ್ಪುಗಳನ್ನು ಮಾಡಿರುವುದು ಸದ್ಯ ಕ್ರಿಕೆಟ್ ಪ್ರಿಯರು ಮಾತ್ರವಲ್ಲದೇ ಹಿರಿಯ ಕ್ರಿಕೆಟಿಗರ ಕಣ್ಣಿಗೂ ಬಿದ್ದಿದೆ. ಬ್ಯಾಕ್ ಟು ಬ್ಯಾಕ್ ಕಳಪೆ ಪ್ರದರ್ಶನ ತೋರುತ್ತಿರುವ ಅಭಿಷೇಕ್ರನ್ನು ತಂಡದಿಂದ ತೆಗೆದುಹಾಕಬೇಕೆಂಬ ಕೂಗುಗಳು ಹೆಚ್ಚಾಗಿವೆ. ಅವರ ಸ್ಥಾನದಲ್ಲಿ ರಿಂಕು ಸಿಂಗ್‌ಗೆ ಅವಕಾಶ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರು ಅಭಿಪ್ರಾಯಿಸಿದ್ದಾರೆ.