ಲಖನೌ: ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ( Mohammed Shami ) ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೈಡ್ರಾಮಾ ಶುರುವಾಗಿದೆ. ಇತ್ತೀಚೆಗೆ ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಅವರು, ಶಮಿ ಅಥವಾ ಅವರ ಕುಟುಂಬದ ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ, ನಾನು ಅವರ ವಿರುದ್ಧವೇ ಚುನಾವಣಾ ಕಣಕ್ಕಿಳಿಯುತ್ತೇನೆ" ಎಂದು ಸವಾಲೆಸೆದಿದ್ದರು. ಈ ಚರ್ಚೆ ಕಾವೇರುತ್ತಿದ್ದಂತೆ ಇಷ್ಟು ದಿನ ಮೌನವಾಗಿದ್ದ ಮೊಹಮ್ಮದ್ ಶಮಿ ಕೊನೆಗೂ ಮೌನ ಮುರಿದಿದ್ದು, ತಮ್ಮದೇ ಆದ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
ತಮ್ಮ ಮಾಜಿ ಪತ್ನಿಯ ಚುನಾವಣಾ ಸವಾಲಿನ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಶಮಿ ಅತ್ಯಂತ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದಾರೆ. ಯಾರಿಗೆ ಎಲ್ಲಿಂದ ಬೇಕಾದರೂ ಸ್ಪರ್ಧಿಸುವ ಹಕ್ಕಿದೆ. ಯಾರು ಬೇಕಾದರೂ ಚುನಾವಣೆಗೆ ನಿಲ್ಲಲಿ, ನಮಗೇನೂ ಅಭ್ಯಂತರವಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಮೈದಾನ ಎಲ್ಲರಿಗೂ ಮುಕ್ತವಾಗಿದೆ ಎಂದು ಉತ್ತರಿಸಿದ್ದಾರೆ. ಆದರೆ, ತಾವು ಸ್ವತಃ ಚುನಾವಣೆಗೆ ಧುಮುಕುತ್ತಿದ್ದೇನೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಶಮಿ ಯಾವುದೇ ನೇರ ಸುಳಿವು ನೀಡದಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ರಾಜಕೀಯ ರಾದ್ಧಾಂತಕ್ಕೆ ಮುಖ್ಯ ಕಾರಣವಾಗಿದ್ದು ರಾಷ್ಟ್ರೀಯ ಲೋಕದಳ (RLD) ರಾಷ್ಟ್ರೀಯ ಅಧ್ಯಕ್ಷ ಚೌಧರಿ ಜಯಂತ್ ಸಿಂಗ್ ಅವರನ್ನು ಮೊಹಮ್ಮದ್ ಶಮಿ ಭೇಟಿಯಾಗಿದ್ದು. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉತ್ತರ ಪ್ರದೇಶದ ಅಮ್ರೋಹಾ ವಿಧಾನಸಭಾ ಕ್ಷೇತ್ರದಿಂದ ಶಮಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡಿದ್ದವು. ಇದರ ಬೆನ್ನಲ್ಲೇ ಅವರ ಮಾಜಿ ಪತ್ನಿ ಹಸೀನ್ ಜಹಾನ್, ಶಮಿ ಕುಟುಂಬವನ್ನು ಸೋಲಿಸುವುದೇ ತಮ್ಮ ಮುಖ್ಯ ಉದ್ದೇಶವೆಂದು ಬಹಿರಂಗವಾಗಿ ಘೋಷಿಸಿ ರಾಜಕೀಯ ಕಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದರು.
ಆದರೆ, ಶಮಿ ಅವರ ಅಣ್ಣ ಹಸೀಬ್ ಅಹಮದ್ ಈ ರಾಜಕೀಯ ವದಂತಿಗಳನ್ನು ತಳ್ಳಿಹಾಕಲು ಪ್ರಯತ್ನಿಸಿದ್ದಾರೆ. ಜಯಂತ್ ಚೌಧರಿ ಅವರೊಂದಿಗಿನ ಭೇಟಿಯು ಕೇವಲ ಕುಟುಂಬಕ್ಕೆ ಸಂಬಂಧಿಸಿದ ಗೌರವಯುತ ಭೇಟಿಯಷ್ಟೇ ಹೊರತು ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇತ್ತೀಚೆಗೆ ಹಸೀಬ್ ಕೂಡ ದೆಹಲಿಯಲ್ಲಿ ಮತ್ತೆ ಜಯಂತ್ ಸಿಂಗ್ ಅವರನ್ನು ಭೇಟಿಯಾಗಿರುವುದು ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಕುಟುಂಬದ ಯಾರಾದರೂ ಒಬ್ಬರು ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.
ಇನ್ನೊಂದೆಡೆ, ಹಸೀನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕಟು ಮಾತುಗಳನ್ನು ಮುಂದುವರಿಸಿದ್ದಾರೆ. ಶಮಿ ಅಥವಾ ಅವರ ಕುಟುಂಬದವರಿಗೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಷ್ಟು ಯೋಗ್ಯತೆಯಾಗಲಿ ಅಥವಾ ಧೈರ್ಯವಾಗಲಿ ಇಲ್ಲ. ಕೇವಲ ಹಣ ಮತ್ತು ಹಮ್ಮಿನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಅವರಿಗೆ ಧೈರ್ಯವಿದ್ದರೆ ಅಮ್ರೋಹಾದಿಂದ ನನ್ನ ವಿರುದ್ಧ ಸ್ಪರ್ಧಿಸಿ ತೋರಿಸಲಿ. ಇಲ್ಲಿನ ಜನರಿಗೆ ಅವರ ನಿಜ ಬಣ್ಣ ಏನೆಂಬುದು ಚೆನ್ನಾಗಿ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಶಮಿ ಕುಟುಂಬಕ್ಕೆ ಠೇವಣಿ ಕೂಡ ಸಿಗುವುದಿಲ್ಲ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಲ್ಲಿ ಕ್ರಿಕೆಟ್ ಮೈದಾನದ ಈ ತಾರಾ ಬೌಲರ್ ಹಾಗೂ ಅವರ ಪತ್ನಿಯ ನಡುವೆ ರಾಜಕೀಯ ಸಮರ ಏರ್ಪಡಲಿದೆಯೇ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಮಿ ಅವರ ಈ ಮೌನ ಮತ್ತು ಅವರ 'ಓಪನ್ ಫೀಲ್ಡ್' ಹೇಳಿಕೆಯು ಮುಂಬರುವ ದಿನಗಳಲ್ಲಿ ಅವರು ನಿಜಕ್ಕೂ ರಾಜಕೀಯ ರಂಗಪ್ರವೇಶ ಮಾಡುತ್ತಾರಾ ಅಥವಾ ಕ್ರಿಕೆಟ್ಗಷ್ಟೇ ಸೀಮಿತವಾಗಿರುತ್ತಾರಾ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಮತ್ತು ರಾಜಕೀಯ ವಿಶ್ಲೇಷಕರಲ್ಲಿ ಜೀವಂತವಾಗಿರಿಸಿದೆ, (ಏಜೆನ್ಸೀಸ್).