ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ
ನವದೆಹಲಿ: ಟೀಮ್ ಇಂಡಿಯಾದ (Team India) ಎಲ್ಲ ಹಾಲಿ ಆಟಗಾರರು, ಡಿಸೆಂಬರ್ 24ರಿಂದ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಕಡ್ಡಾಯವಾಗಿ ಆಡಬೇಕೆಂದು ಬಿಸಿಸಿಐ (BCCI) ಸೂಚಿಸಿದೆ. ಇದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮಾತ್ರವಲ್ಲದೆ ಶುಭಮಾನ್ ಗಿಲ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಸಹಿತ ಎಲ್ಲ ಆಟಗಾರರು ಕನಿಷ್ಠ 2 ದೇಶೀಯ ಏಕದಿನ ಪಂದ್ಯಗಳಲ್ಲಿ ಆಡಬೇಕಾಗಿದೆ. ಆದರೆ ಫಿಟ್ನೆಸ್ ಸಮಸ್ಯೆ ಹೊಂದಿರುವ ಶ್ರೇಯಸ್ ಅಯ್ಯರ್ ಮಾತ್ರ ವಿನಾಯಿತಿ ಪಡೆಯಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೇ ಟಿ20 (ಡಿ.19) ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ (2026ರ ಜ.11) ನಡುವೆ 3 ವಾರಗಳ ಬಿಡುವು ಇದೆ. ಈ ಸಮಯದಲ್ಲಿ ಎಲ್ಲ ಹಿರಿಯ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡಬೇಕೆಂದು ಬಿಸಿಸಿಐ ಬಯಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಈಗಾಗಲೆ ಈ ಕಟ್ಟಪ್ಪಣೆಯನ್ನು ಆಟಗಾರರಿಗೆ ತಲುಪಿಸಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಡಿ.24ರಿಂದ ಕಿವೀಸ್ ವಿರುದ್ಧದ ಏಕದಿನ ಸರಣಿಯ ನಡುವೆ ಒಟ್ಟು 6 ಸುತ್ತುಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಈ ಪೈಕಿ ಯಾವ 2 ಪಂದ್ಯಗಳಲ್ಲಿ ಆಡಬೇಕೆಂಬುದು ಆಟಗಾರರು ಮತ್ತು ಅವರ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಟ್ಟ ವಿಚಾರವಾಗಿದೆ.
2024-25ರ ಆಸ್ಟ್ರೆಲಿಯಾ ಪ್ರವಾಸದ ಹೀನಾಯ ಸೋಲಿನ ಬಳಿಕ ಬಿಸಿಸಿಐ, ಟೀಮ್ ಇಂಡಿಯಾದ ಎಲ್ಲ ಕ್ರಿಕೆಟಿಗರು, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಬಿಡುವು ಇರುವ ವೇಳೆ ದೇಶೀಯ ಕ್ರಿಕೆಟ್ನಲ್ಲಿ ಆಡುವುದನ್ನು ಕಡ್ಡಾಯಗೊಳಿಸಿದೆ.