ಏಕದಿನ ಕ್ರಿಕೆಟ್ನಲ್ಲಿ 5,000 ಪಂದ್ಯಗಳ ಮೈಲಿಗಲ್ಲು
ಡುಂಡೀ: ಸ್ಕಾಟ್ಲೆಂಡ್ ಮತ್ತು ಕೆನಡಾ ತಂಡಗಳ ನಡುವೆ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ನಲ್ಲಿ ಶುಕ್ರವಾರ ನಡೆದ ಕಾದಾಟವು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ (
) ಇತಿಹಾಸದ 5,000ನೇ ಪಂದ್ಯವೆಂಬ ಮೈಲಿಗಲ್ಲು ನೆಟ್ಟಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್ 9 ರನ್ಗಳಿಂದ ಗೆಲುವು ಸಾಧಿಸಿತು.
1971ರ ಜನವರಿ 5ರಂದು ಆಸ್ಟ್ರೆಲಿಯಾ-ಇಂಗ್ಲೆಂಡ್ ನಡುವೆ ಮೆಲ್ಬೋರ್ನ್ನಲ್ಲಿ ಚೊಚ್ಚಲ ಏಕದಿನ ಪಂದ್ಯ ನಡೆದಿತ್ತು. 55 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ 5 ಸಾವಿರ ಪಂದ್ಯಗಳನ್ನು ಪೂರೈಸಿದೆ. ಮೊದಲ 3 ಏಕದಿನ ವಿಶ್ವಕಪ್ಗಳಲ್ಲಿ ತಲಾ 60 ಓವರ್ಗಳ ಪಂದ್ಯ ನಡೆದಿದ್ದರೆ, ಇಂಗ್ಲೆಂಡ್ನಲ್ಲಿ ಕೆಲ ದ್ವಿಪಕ್ಷೀಯ ಸರಣಿಗಳಲ್ಲಿ ತಲಾ 55 ಓವರ್ಗಳ ಪಂದ್ಯ ಆಡಿಸಲಾಗಿತ್ತು. ಆಸ್ಟ್ರೆಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನದಲ್ಲಿ ತಲಾ 40&35 ಓವರ್ಗಳ (ಓವರ್ಗೆ 8 ಎಸೆತ) ಪಂದ್ಯಗಳೂ ನಡೆದಿದ್ದವು. 1995ರ ನಂತರದಲ್ಲಿ ಎಲ್ಲ ಏಕದಿನ ಪಂದ್ಯಗಳೂ ತಲಾ 50 ಓವರ್ಗಳದ್ದೇ ಆಗಿದೆ. ಸಾವಿರ ಏಕದಿನ ಪಂದ್ಯ ಆಡಲು 24 ವರ್ಷ ಹಿಡಿದಿದ್ದರೆ, ನಂತರದ 4 ಸಾವಿರ ಪಂದ್ಯಗಳನ್ನು 31 ವರ್ಷಗಳಲ್ಲೇ ಆಡಲಾಗಿದೆ.
ಭಾರತದ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ನಲ್ಲಿ ಸರ್ವಾಧಿಕ 463 ಪಂದ್ಯ ಆಡಿ, 18,426 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಸರ್ವಾಧಿಕ 534 ವಿಕೆಟ್ ಸಾಧಕರಾಗಿದ್ದಾರೆ. ಆಸ್ಟ್ರೆಲಿಯಾ (1,025), ಭಾರತ (1,081), ಪಾಕಿಸ್ತಾನ (1,002) ಸಾವಿರಕ್ಕೂ ಅಧಿಕ ಪಂದ್ಯ ಆಡಿರುವ 3 ತಂಡಗಳಾಗಿವೆ. ಇಂಗ್ಲೆಂಡ್ ಸರ್ವಾಧಿಕ ಮೊತ್ತ (498/4) ಗಳಿಸಿದ ದಾಖಲೆ ಹೊಂದಿದೆ. ರೋಹಿತ್ ಶರ್ಮ (264) ಪಂದ್ಯವೊಂದರಲ್ಲಿ ಸರ್ವಾಧಿಕ ವೈಯಕ್ತಿಕ ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ಗರಿಷ್ಠ 54 ಶತಕ ಸಾಧಕರಾಗಿದ್ದಾರೆ. ಎಬಿ ಡಿವಿಲಿಯರ್ಸ್ ಅತಿವೇಗದ ಶತಕ (31 ಎಸೆತ) ಮತ್ತು ಅರ್ಧಶತಕದ (16) ವಿಶ್ವದಾಖಲೆ ಹೊಂದಿದ್ದಾರೆ. ವಕಾರ್ ಯೂನಿಸ್ ಸರ್ವಾಧಿಕ 13 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಚಮಿಂಡಾ ವಾಸ್ 19 ರನ್ಗಳಿಗೆ 8 ವಿಕೆಟ್ ಕಬಳಿಸಿರುವುದು ಏಕದಿನ ಪಂದ್ಯವೊಂದರಲ್ಲಿ ಸರ್ವಶ್ರೇಷ್ಠ ಬೌಲಿಂಗ್ ನಿರ್ವಹಣೆಯಾಗಿದೆ.
200: ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಇದುವರೆಗೆ 12 ದ್ವಿಶತಕಗಳು ಸಿಡಿದಿವೆ. ಈ ಪೈಕಿ 3 ದ್ವಿಶತಕಗಳನ್ನು ರೋಹಿತ್ ಶರ್ಮ ಒಬ್ಬರೇ ಸಿಡಿಸಿದ್ದಾರೆ. 7 ದ್ವಿಶತಕಗಳು ಭಾರತೀಯರ ಬ್ಯಾಟ್ನಿಂದಲೇ ಬಂದಿವೆ. ಮೊದಲ ದ್ವಿಶತಕ ಸಿಡಿಸಿದ್ದು ಕೂಡ ಭಾರತೀಯ (ಸಚಿನ್ ತೆಂಡುಲ್ಕರ್) ಎಂಬುದು ಗಮನಾರ್ಹ.