ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಕೈಯಿಂದ ಭಾರತ ತಂಡ ಕಳೆದ ವರ್ಷ ಪುರುಷರ ಏಷ್ಯಾಕಪ್ ಟಿ20 ಟೂರ್ನಿಯ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದರಿಂದ ಕೊನೆಗೆ ಭಾರತಕ್ಕೆ ಬೇರೆಯವರೂ ಪ್ರಶಸ್ತಿ ವಿತರಿಸಲು ಬಿಡದೆ ನಖ್ವಿ ಉದ್ದಟತನ ಮೆರೆದಿದ್ದರು. ಇದೀಗ ಮತ್ತೆ ಮಹಿಳಾ ಟಿ20 ಏಷ್ಯಾಕಪ್ (
Women''s Asia Cup
) ಟೂರ್ನಿಗೆ ದುಬೈನಲ್ಲಿ ವೇದಿಕೆ ಸಜ್ಜಾಗುತ್ತಿರುವ ನಡುವೆ, ಭಾರತದ ಮಹಿಳೆಯರು ಟ್ರೋಫಿ ಗೆದ್ದರೂ ಮತ್ತೆ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಕಾಣಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಖ್ವಿ ಈಗಲೂ ಅಧ್ಯಕ್ಷರಾಗಿದ್ದು, ಮಹಿಳಾ ಏಷ್ಯಾಕಪ್ನಲ್ಲಿ ಮತ್ತೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿರುವ ಮಹಿಳಾ ಏಷ್ಯಾಕಪ್ನಲ್ಲಿ ಭಾರತ&ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು, ಸೆಪ್ಟೆಂಬರ್ 5ಕ್ಕೆ ಮುಖಾಮುಖಿ ಆಗಲಿವೆ.
ಏಕದಿನ ವಿಶ್ವ ಚಾಂಪಿಯನ್ ಆಗಿರುವ ಹರ್ಮಾನ್ಪ್ರೀತ್ ಕೌರ್ ಪಡೆ ಏಷ್ಯಾಕಪ್ನಲ್ಲಿ ಫೇವರಿಟ್ ಎನಿಸಿದ್ದು, ಪ್ರಶಸ್ತಿ ಗೆದ್ದರೆ ಸೂರ್ಯಕುಮಾರ್ ಯಾದವ್ ಬಳಗದಂತೆ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸುವುದು ಖಚಿತ. ಹೀಗಾಗಿ ನಖ್ವಿ ಈ ಬಾರಿಯೂ ಟ್ರೋಫಿಯನ್ನು ತಾನೇ ವಿತರಿಸಬೇಕೆಂದು ಪಟ್ಟು ಹಿಡಿಯುವರೇ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ನಖ್ವಿ ತನ್ನ ಉದ್ದಟತನ ಮುಂದುವರಿಸಿದರೆ, ಹರ್ಮಾನ್ಪ್ರೀತ್ ಕೌರ್ ಪಡೆಯೂ ಚಾಂಪಿಯನ್ ಪಟ್ಟಕ್ಕೇರಿದರೂ ಟ್ರೋಫಿ ಇಲ್ಲದೆ ತವರಿಗೆ ಮರಳಬೇಕಾಗುತ್ತದೆ.