ಅಹಮದಾಬಾದ್: ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಇದರ ನಡುವೆ, ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯ ಕೋಚ್ ಆ್ಯಂಡಿ ಫ್ಲವರ್, ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ವಿರಾಟ್, ನೀವೇ ನಮ್ಮ ಡ್ರೆಸ್ಸಿಂಗ್ ಕೋಣೆಯ ಅಸಲಿ ಹೃದಯ ಬಡಿತ" ಎಂದು ಕೋಚ್ ಆಡಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಗಾಯದ ನಡುವೆಯೂ ತಂಡಕ್ಕೆ ಆಸರೆಯಾದ ‘ಕಿಂಗ್’ ಕೊಹ್ಲಿ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್‌ನಲ್ಲಿ 156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಒಂದು ಹಂತದಲ್ಲಿ ಭಾರಿ ಆತಂಕಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ (16 ಎಸೆತಗಳಲ್ಲಿ 32 ರನ್) ಬಿರುಸಿನ ಆರಂಭ ನೀಡಿದರೂ, ನಂತರ ಬಂದ ದೇವದತ್ ಪಡಿಕ್ಕಲ್ (1), ನಾಯಕ ರಜತ್ ಪಾಟಿದಾರ್ (15) ಮತ್ತು ಕೃನಾಲ್ ಪಾಂಡ್ಯ (1) ವಿಕೆಟ್‌ಗಳು ಬೇಗನೆ ಉರುಳಿದವು. 91 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರ್‌ಸಿಬಿ ತಲ್ಲಣಗೊಂಡಿದ್ದಾಗ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದು ಇದೇ ವಿರಾಟ್ ಕೊಹ್ಲಿ.
ಪಂದ್ಯದ ಮಧ್ಯೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಲೆಕ್ಕಿಸದೆ ಬ್ಯಾಟ್ ಬೀಸಿದ ಕೊಹ್ಲಿ, 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಜಿತೇಶ್ ಶರ್ಮಾ (ಅಜೇಯ 11) ಅವರೊಂದಿಗೆ ಅತ್ಯುತ್ತಮ ಜೊತೆಯಾಟ ಆಡಿದ ಕೊಹ್ಲಿ, ತಂಡವನ್ನು ಸತತ ಎರಡನೇ ಬಾರಿಗೆ ವಿಜಯದ ದಡ ಸೇರಿಸಿದರು.
"ನಿಮ್ಮ ಧೈರ್ಯ ನಮಗೆಲ್ಲರಿಗೂ ಮಾದರಿ" ಎಂದ ಕೋಚ್!
ಗೆಲುವಿನ ನಂತರ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕೋಚ್ ಆ್ಯಂಡಿ ಫ್ಲವರ್ ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ. ಕೊಹ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ವಿರಾಟ್, ನಿಮ್ಮ ಮೇಲೆ ಜಗತ್ತಿನ ಕಣ್ಣಿರುತ್ತದೆ ಮತ್ತು ಅದು ಸರಿಯೂ ಹೌದು. ಮೈದಾನದಲ್ಲಿ ನೀವು ತೋರುವ ಧೈರ್ಯ, ನಿರ್ಭೀತ ವರ್ತನೆ ಇಡೀ ತಂಡಕ್ಕೆ ರೋಲ್ ಮಾಡೆಲ್ ಆಗಿದೆ. ಈ ಇಡೀ ಸೀಸನ್‌ನಲ್ಲಿ, ವಿಶೇಷವಾಗಿ ಪ್ಲೇಆಫ್ಸ್‌ನಲ್ಲಿ ತಂಡ ತೋರಿದ ಜವಾಬ್ದಾರಿಯುತ ಆಟ ನನ್ನ ಮನಸ್ಸಿಗೆ ಆಪ್ತವಾಗಿದೆ. ಉನ್ನತ ಮಟ್ಟದ ಕ್ರಿಕೆಟ್ ಆಡಲು ಕೇವಲ ಕೌಶಲ್ಯವಷ್ಟೇ ಸಾಲದು, ಅದಕ್ಕೆ ದೊಡ್ಡ ಹೃದಯ ಮತ್ತು ಬುದ್ಧಿವಂತಿಕೆಯೂ ಬೇಕು ಎಂಬುದನ್ನು ನಮ್ಮ ತಂಡ ಸಾಬೀತುಪಡಿಸಿದೆ" ಎಂದು ಹೆಮ್ಮೆಯಿಂದ ಹೇಳಿದರು.
ಭುವಿ ಹಾಗೂ ಕೃನಾಲ್ ಪಾಂಡ್ಯ ಆಟಕ್ಕೂ ಹ್ಯಾಟ್ಸಾಫ್
ಇದೇ ವೇಳೆ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನೂ ಕೋಚ್ ಶ್ಲಾಘಿಸಿದರು. "ಭುವಿ, ಈ ಋತುವಿನಲ್ಲಿ ನೀವು ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ರೀತಿ ಅದ್ಭುತ. ಅದರಲ್ಲೂ ಡೆತ್ ಓವರ್‌ಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳನ್ನು ನೀವು ಚಾಣಾಕ್ಷತನದಿಂದ ಕಟ್ಟಿಹಾಕಿದ್ದೀರಿ. ನಿಮ್ಮಂತಹ ಆಟಗಾರ ನಮ್ಮ ತಂಡದಲ್ಲಿ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇನ್ನು ಕೃನಾಲ್ ಪಾಂಡ್ಯ ಅವರು ಎಂತಹದೇ ಒತ್ತಡದ ಪರಿಸ್ಥಿತಿಯಿದ್ದರೂ ತಾಳ್ಮೆ ಕಳೆದುಕೊಳ್ಳದೆ ತಂಡದ ಗೆಲುವಿಗೆ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ" ಎಂದು ಆಂಡಿ ಫ್ಲವರ್ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದರು,(ಏಜೆನ್ಸೀಸ್).