T20 World Cup: ಕೆನಡಾ ಎದುರು ರನ್ಮಳೆ ಹರಿಸಿ ಗೆದ್ದ ದಕ್ಷಿಣ ಆಫ್ರಿಕಾ
ಅಹಮದಾಬಾದ್: ನಾಯಕ ಏಡನ್ ಮಾರ್ಕ್ರಮ್ (59 ರನ್, 32 ಎಸೆತ, 10 ಬೌಂಡರಿ, 1 ಸಿಕ್ಸರ್) ಬಿರುಸಿನ ಅರ್ಧಶತಕ ಮತ್ತು ವೇಗಿ ಲುಂಗಿ ಎನ್ಗಿಡಿ (31ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ರನ್ನರ್ಅಪ್ ದಕ್ಷಿಣ ಆಫ್ರಿಕಾ ತಂಡ ಚುಟುಕು ಕ್ರಿಕೆಟ್ ವಿಶ್ವಕಪ್ (T20 World Cup) ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಕೆನಡಾ ಎದುರು 57 ರನ್ಗಳಿಂದ ಗೆಲುವು ಸಾಧಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ಹೊನಲುಬೆಳಕಿನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಇದರಿಂದ ಬ್ಯಾಟಿಂಗ್ ಸ್ನೇಹಿ ಪಿಚ್ನ ಸಂಪೂರ್ಣ ಲಾಭ ಬಳಸಿಕೊಂಡ ಹರಿಣಗಳ ಪಡೆ ರನ್ಪ್ರವಾಹ ಹರಿಸಿ 4 ವಿಕೆಟ್ಗೆ 213 ರನ್ ಕಲೆಹಾಕಿತು. ಪ್ರತಿಯಾಗಿ ಕೆನಡಾ, ನವನೀತ್ ಧಲಿವಲ್ (64 ರನ್, 49 ಎಸೆತ, 7 ಬೌಂಡರಿ, 1 ಸಿಕ್ಸರ್) ಹೋರಾಟದ ನಡುವೆಯೂ 8 ವಿಕೆಟ್ಗೆ 156 ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಮುನ್ನ ಮಾರ್ಕ್ರಮ್ 28 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಇದರಿಂದ ದ. ಆಫ್ರಿಕಾ ಪವರ್ಪ್ಲೇನಲ್ಲಿ 66 ರನ್ ದೋಚಿತು. ನಂತರ ಮುರಿಯದ 5ನೇ ವಿಕೆಟ್ಗೆ ಮಿಲ್ಲರ್-ಸ್ಟಬ್ಸ್ ಜೋಡಿ 39 ಎಸೆತಗಳಲ್ಲೇ 75 ರನ್ ಜತೆಯಾಟವಾಡಿ ಮೊತ್ತ ಏರಿಸಿತು. ಜಸ್ಕರಣ್ ಸಿಂಗ್ ಎಸೆದ ಇನಿಂಗ್ಸ್ನ ಕೊನೇ ಓವರ್ನಲ್ಲಿ ಡೇವಿಡ್ ಮಿಲ್ಲರ್ (39*) ಮತ್ತು ಟ್ರಿಸ್ಟಾನ್ ಸ್ಟಬ್ಸ್ (34*) 21 ರನ್ ಕಸಿದರು.
ದಕ್ಷಿಣ ಆಫ್ರಿಕಾ: 4 ವಿಕೆಟ್ಗೆ 213 (ಮಾರ್ಕ್ರಮ್ 59, ಡಿಕಾಕ್ 25, ರಿಕೆಲ್ಟನ್ 33, ಬ್ರೆವಿಸ್ 6, ಮಿಲ್ಲರ್ 39*, ಸ್ಟಬ್ಸ್ 34*, ಅಂಶ್ ಪಟೇಲ್ 31ಕ್ಕೆ 3, ದಿಲ್ಪ್ರೀತ್ 40ಕ್ಕೆ 1). ಕೆನಡಾ: 8 ವಿಕೆಟ್ಗೆ 156 (ಯುವರಾಜ್ ಸಮ್ರಾ 12, ನವನೀತ್ ಧಲಿವಾಲ್ 64, ಹರ್ಷ್ ಥಾಕರ್ 33, ಸಾದ್ ಬಿನ್ ಜಾರ್ 11, ಎನ್ಗಿಡಿ 31ಕ್ಕೆ 4, ಮಾಕೋರ್ ಯಾನ್ಸೆನ್ 30ಕ್ಕೆ 2, ರಬಾಡ 40ಕ್ಕೆ 1). ಪಂದ್ಯಶ್ರೇಷ್ಠ: ಲುಂಗಿ ಎನ್ಗಿಡಿ