ಗೌತಮ್​ ಗಂಭೀರ್​, ಸೂರ್ಯಕುಮಾರ್​ ಯಾದವ್​ ಮತ್ತು ಆ್ಯರನ್​ ಫಿಂಚ್​ 
ಕ್ರಿಕೆಟ್

ಬಹುತೇಕ ಕ್ರಿಕೆಟಿಗರು ಚೂಯಿಂಗ್​ ಗಮ್ ಅಗಿಯೋದೇಕೆ? ಇದರ ಹಿಂದಿರುವ ರಹಸ್ಯವೇನು? Chewing Gum ​

ಪ್ರಮುಖ ಮುಖ್ಯಾಂಶಗಳು

  • ಆಟಗಾರರು ಬಬಲ್ ಗಮ್​ ಅಗಿಯುವುದನ್ನು ನಾವು ಹೆಚ್ಚಾಗಿ ನೋಡುತ್ತಲೇ ಇರುತ್ತೇವೆ
  • ವಾಸ್ತವವಾಗಿ ಇದರ ಹಿಂದೆ ಒಂದು ವಿಶೇಷ ಕಾರಣವಿದೆ ಎಂದು ತಜ್ಞರು ಹೇಳುತ್ತಾರೆ
  • ಚೂಯಿಂಗ್​ ಗಮ್​ ಅಗಿಯುವ ವ್ಯಕ್ತಿಯಲ್ಲಿ ಜಾಗರೂಕತೆ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ
Chewing Gum : ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್... ಅದು ಯಾವುದೇ ಆಟವಾಗಿರಲಿ, ಆಟಗಾರರು ಬಬಲ್ ಗಮ್ ಅಥವಾ ಚೂಯಿಂಗ್​ ಗಮ್​ ಅಗಿಯುವುದನ್ನು ನಾವು ಹೆಚ್ಚಾಗಿ ನೋಡುತ್ತಲೇ ಇರುತ್ತೇವೆ. ವಿಶೇಷವಾಗಿ ಕ್ರಿಕೆಟ್‌ನಲ್ಲಿ, ಕಪಿಲ್ ದೇವ್‌ನಿಂದ ಹಿಡಿದು ಇಂದಿನ ಸೂರ್ಯ ಕುಮಾರ್ ಯಾದವ್‌ವರೆಗೆ ಅನೇಕ ಕ್ರಿಕೆಟಿಗರು ಮೈದಾನದಲ್ಲಿ ಈ ಬಬಲ್ ಗಮ್ ಅಗಿಯುವುದನ್ನು ಟಿವಿಯಲ್ಲಿ ನೋಡಿದ್ದೇವೆ.
ಅಷ್ಟಕ್ಕೂ ಆಟಗಾರರು ಈ ಚೂಯಿಂಗ್ ಗಮ್ ಅನ್ನು ಏಕೆ ಬಳಸುತ್ತಾರೆ? ಇದನ್ನು ಅಗಿಯುವುದರಿಂದ ಏನಾದರೂ ಪ್ರಯೋಜನವಿದೆಯೇ? ಎಂಬ ಪ್ರಶ್ನೆ ಮೂಡದೇ ಇರದು. ವಾಸ್ತವವಾಗಿ ಇದರ ಹಿಂದೆ ಒಂದು ವಿಶೇಷ ಕಾರಣವಿದೆ ಎಂದು ತಜ್ಞರು ಹೇಳುತ್ತಾರೆ. ಚೂಯಿಂಗ್​ ಗಮ್​ ಅಗಿಯುವ ವ್ಯಕ್ತಿಯಲ್ಲಿ ಜಾಗರೂಕತೆ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಚೂಯಿಂಗ್​ ಗಮ್​ ಲಾಭಗಳು

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ಈ ಚೂಯಿಂಗ್ ಗಮ್ ಅನ್ನು ಅಗಿಯುತ್ತಾರೆ. ಆದಾಗ್ಯೂ, ಚಿಕ್ಕ ಮಕ್ಕಳು ಇದನ್ನು ತಿಂದರೆ ಹಿರಿಯರು ಅಥವಾ ಪಾಲಕರು ಆಕ್ರೋಶಗೊಳ್ಳುತ್ತಾರೆ. ಏಕೆಂದರೆ ತಪ್ಪಾಗಿ ನುಂಗಿಬಿಟ್ಟರೆ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಎನ್ನುತ್ತಾರೆ. ಆದರೆ, ಈ ಚೂಯಿಂಗ್ ಗಮ್ ಅನಾರೋಗ್ಯಕರ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಚೂಯಿಂಗ್ ಗಮ್ ಡಬಲ್ ಚಿನ್​ (ಗಲ್ಲ) ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ, ಮೆದುಳಿನ ಹಿಪೊಕ್ಯಾಂಪಸ್ ಎಂಬ ಭಾಗವನ್ನು ಸಕ್ರಿಯಗೊಳಿಸುತ್ತದೆ. ಇದರ ಪರಿಣಾಮ ಸ್ಮರಣೆ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ, ಚೂಯಿಂಗ್​ ಗಮ್​ ಅಗಿಯುವುದರಿಂದ ಒತ್ತಡ ಮತ್ತು ಕಿರಿಕಿರಿ ಕಡಿಮೆಯಾಗುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ಸಹ ಕಡಿಮೆ ಮಾಡುತ್ತದೆ. ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ.
ಬಬಲ್ ಗಮ್ ಅಗಿಯುವಾಗ ಮೆದುಳಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ರಕ್ತ ಪೂರೈಕೆಯಾಗುತ್ತದೆ. ಇದರಿಂದ ಮೆದುಳಿಗೆ ವಿಶ್ರಾಂತಿ ನೀಡುವ ಸಿರೊಟೋನಿನ್ ಬಿಡುಗಡೆಯಾಗುತ್ತದೆ. ಆದ್ದರಿಂದ, ಕ್ರಿಕೆಟಿಗರು ಮೈದಾನದಲ್ಲಿರುವಾಗ ಆಯಾಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ಕಾರಣಗಳಿಗಾಗಿ, ಆಟಗಾರರು ಬಬಲ್ ಗಮ್ ಅಗಿಯಲು ಇಷ್ಟಪಡುತ್ತಾರೆ. ವಿಶೇಷವಾಗಿ, ಕ್ರಿಕೆಟಿಗರು ರಿಫ್ರೆಶ್ ಆಗಿದ್ದರೆ ಮಾತ್ರ ಚೆನ್ನಾಗಿ ಆಡಬಹುದು.
ಶಕ್ತಿಯನ್ನು ಕಳೆದುಕೊಳ್ಳದೆ ದೀರ್ಘಕಾಲ ಮೈದಾನದಲ್ಲಿ ಉಳಿಯಲು ಚೂಯಿಂಗ್​ ಗಮ್ ಅನುವು ಮಾಡಿಕೊಡುತ್ತದೆ. ಇದನ್ನು ಅಗಿಯುವುದರಿಂದ ಮೆದುಳು ಎಚ್ಚರವಾಗಿರುತ್ತದೆ ಮತ್ತು ನರಮಂಡಲವು ಮೆದುಳಿನಿಂದ ದೇಹದ ಭಾಗಗಳಿಗೆ ಸಂದೇಶಗಳನ್ನು ತ್ವರಿತವಾಗಿ ಕಳುಹಿಸುತ್ತದೆ. ಅದಕ್ಕಾಗಿಯೇ ಆಟಗಾರರು ಹೆಚ್ಚು ಎಚ್ಚರವಾಗಿರಲು ಈ ಬಬಲ್ ಗಮ್ ಅನ್ನು ಅಗಿಯುತ್ತಾರೆ.
ಇಲ್ಲಿ ಮುಖ್ಯವಾದ ವಿಷಯವೆಂದರೆ ಬಬಲ್ ಗಮ್ ಅಗಿಯುವುದರಿಂದ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗುತ್ತದೆ. ಇದರಿಂದ ಆಟಗಾರರಿಗೆ ತುಂಬಾ ಬಾಯಾರಿಕೆಯನ್ನುಂಟು ಮಾಡುತ್ತದೆ. ಇದರಿಂದ ಆಟಗಾರರು ನೀರು ಕುಡಿಯುತ್ತಾರೆ. ಸಾಕಷ್ಟು ನೀರು ಕುಡಿಯದಿದ್ದರೆ, ಅವರ ದೇಹವು ನಿರ್ಜಲೀಕರಣಗೊಳ್ಳಬಹುದು ಹೀಗಾಗಿ ಬಬಲ್​ ಗಮ್​ ಈ ವಿಚಾರದಲ್ಲಿ ನೆರವಾಗುತ್ತದೆ, (ಏಜೆನ್ಸೀಸ್​).