ಧೋನಿ ಮೈದಾನಕ್ಕೆ ಕಾಲಿಡುತ್ತಿದ್ದಂತೆ ಕಣ್ಣೀರಾಕಿ ಕೂಗಾಡಿದ ಅಭಿಮಾನಿಗಳು: ಈ ಭಾವುಕ ಕ್ಷಣದ ಹಿಂದಿದೆ ಆ ನೋವು... MS Dhoni  
ಕ್ರಿಕೆಟ್

ಧೋನಿ ಮೈದಾನಕ್ಕೆ ಕಾಲಿಡುತ್ತಿದ್ದಂತೆ ಕಣ್ಣೀರಾಕಿ ಕೂಗಾಡಿದ ಅಭಿಮಾನಿಗಳು: ಈ ಭಾವುಕ ಕ್ಷಣದ ಹಿಂದಿದೆ ಆ ನೋವು... MS Dhoni

ಪ್ರಮುಖ ಮುಖ್ಯಾಂಶಗಳು

  • ಮಹೇಂದ್ರ ಸಿಂಗ್​ ಧೋನಿ... ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ
  • ಧೋನಿ ಹೆಸರು ಹೇಳುತ್ತಿದ್ದಂತೆಯೇ ಅವರ ಸಾಧನೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತದೆ.
  • ಟೀಮ್ ಇಂಡಿಯಾಗೆ ಎರಡು ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ
  • ಧೋನಿ ಮೈದಾನಕ್ಕೆ ಕಾಲಿಟ್ಟರೆ ಸಾಕು ಅಭಿಮಾನಿಗಳು ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಕೂಡ ಕಷ್ಟ
MS Dhoni : ಮಹೇಂದ್ರ ಸಿಂಗ್​  ಧೋನಿ... ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ. ಧೋನಿ ಹೆಸರು ಹೇಳುತ್ತಿದ್ದಂತೆಯೇ ಅವರ ಸಾಧನೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತದೆ. ಟೀಮ್ ಇಂಡಿಯಾಗೆ ಎರಡು ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ. ಧೋನಿ ನಡೆದಾಡಲಿ, ನಗಲಿ ಅಥವಾ ಬ್ಯಾಟಿಂಗ್ ಮಾಡಲಿ, ಅವರನ್ನು ನೋಡಿ ಭಾವುಕರಾಗುವ ಅಭಿಮಾನಿಗಳ ಸಾಮ್ರಾಜ್ಯವೇ ಇದೆ. ಧೋನಿ ಮೈದಾನಕ್ಕೆ ಕಾಲಿಟ್ಟರೆ ಸಾಕು ಅಭಿಮಾನಿಗಳು ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಕೂಡ ಕಷ್ಟಕರವಾಗುತ್ತದೆ. ಇದಕ್ಕೆ ತಾಜಾ ಸಾಕ್ಷಿ ನಿನ್ನೆ (ಮಾರ್ಚ್​ 22) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಒಂದು ಘಟನೆ.
ಐಪಿಎಲ್-2026ರ ಋತುವಿನಲ್ಲಿ ಸಿಎಸ್‌ಕೆ ಪರ ಆಡಲು ತಯಾರಿ ನಡೆಸುತ್ತಿರುವ ಧೋನಿ, ಭಾನುವಾರ ಚೆಪಾಕ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟರು. ಧೋನಿ ಅವರು ಮೈದಾನಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿನ ವಾತಾವರಣ ಸಂಪೂರ್ಣವಾಗಿ ಬದಲಾಯಿತು. ಎಲ್ಲಾ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಅಭ್ಯಾಸದಲ್ಲಿ ಮಗ್ನರಾಗಿದ್ದರು. ಪಂದ್ಯ ನಡೆಯದಿದ್ದರು ಕೂಡ ನಿನ್ನೆ ಚೆಪಾಕ್ ಕ್ರೀಡಾಂಗಣ ಪ್ರೇಕ್ಷಕರಿಂದ ತುಂಬಿತ್ತು. ಇದಕ್ಕೆ ಮುಖ್ಯ ಕಾರಣ ಧೋನಿ. 
ಎಲ್ಲ ಸಿಎಸ್‌ಕೆ ಆಟಗಾರರು ಅಭ್ಯಾಸದಲ್ಲಿ ಮಗ್ನರಾಗಿರುವಾಗ ಧೋನಿ ಮೈದಾನವನ್ನು ಪ್ರವೇಶಿಸಿದರು. ಅವರು ಪೆವಿಲಿಯನ್ ತುದಿಯಿಂದ ಮೈದಾನದ ಮಧ್ಯದವರೆಗೆ ನಿಧಾನವಾಗಿ ನಡೆದು ಬಂದರು. ಆ ಸಮಯದಲ್ಲಿ, ಇಡೀ ಕ್ರೀಡಾಂಗಣ ಧೋನಿಯ ನಾಮ ಸ್ಮರಣೆಯಿಂದ ತುಂಬಿತ್ತು. ಇಡೀ ಪ್ರೇಕ್ಷಕರು ಎದ್ದು ನಿಂತು 'ಧೋನಿ.. ಧೋನಿ.. ಧೋನಿ'.. 'ಥಲಾ.. ಥಲಾ' ಎಂದು ಕೂಗಿದರು ಮತ್ತು ಇಡೀ ಕ್ರೀಡಾಂಗಣ ಕಿರುಚಾಟ ಮತ್ತು ಕೂಗಿನಿಂದ ಮಾರ್ದನಿಸಿತು.
ಅದೇ ಸಮಯದಲ್ಲಿ, ಧೋನಿಯನ್ನು ನೋಡಿದ ನಂತರ ಕೆಲವು ಅಭಿಮಾನಿಗಳು ತುಂಬಾ ಭಾವುಕರಾಗಿ ಅಳುತ್ತಿರುವುದು ಕಂಡುಬಂತು. 2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಅವರು ಐಪಿಎಲ್‌ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಆದರೆ, ಈ ಬಾರಿ, ಧೋನಿಯನ್ನು ನೋಡಿದ ಕೂಡಲೇ ಅಭಿಮಾನಿಗಳು ಈ ಪರಿ ದುಃಖ ವ್ಯಕ್ತಪಡಿಸಲು ಕಾರಣವೆಂದರೆ ಬಹುಶಃ ಧೋನಿಯ ಕೊನೆಯ ಸೀಸನ್ ಇದಾಗಿರಬಹುದು.
19ನೇ ಆವೃತ್ತಿಯು ಧೋನಿಯ ಕೊನೆಯ ಐಪಿಎಲ್​ ಆವೃತ್ತಿ ಎಂಬ ಅಭಿಯಾನವು ಕೆಲವು ಸಮಯದಿಂದ ನಡೆಯುತ್ತಿದೆ. 2023ರಲ್ಲಿ ಪ್ರಶಸ್ತಿ ಗೆದ್ದ ಸಿಎಸ್‌ಕೆ, ಈ ಋತುವಿನಲ್ಲಿ ಮತ್ತೆ ಪ್ರಶಸ್ತಿ ಗೆಲ್ಲುವ ಮತ್ತು ಧೋನಿಗೆ ಭವ್ಯ ವಿದಾಯ ಹೇಳುವ ಆಶಯವನ್ನು ಹೊಂದಿದೆ. ಈ ಬಾರಿ, ಸಿಎಸ್‌ಕೆಗೆ ಸಂಜು ಸ್ಯಾಮ್ಸನ್ ಆಗಮನವು ತಂಡಕ್ಕೆ ಹೆಚ್ಚುವರಿ ಬಲವನ್ನು ನೀಡಿದೆ. ಸಿಎಸ್‌ಕೆ ಮಾರ್ಚ್ 30 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್‌ನ 19ನೇ ಸೀಸನ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).