ಐಪಿಎಲ್ ಪ್ಲೇಆಫ್ ಲೆಕ್ಕಾಚಾರ
- ಎಸ್ಆರ್ಎಚ್ ಎದುರು ಸೋತರೂ ಸಿಎಸ್ಕೆಗಿದೆ ಪ್ಲೇಆಫ್ ಚಾನ್ಸ್
- ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಚೆನ್ನೈ ಪಡೆಗೆ ಅದೃಷ್ಟ ಖುಲಾಯಿಸಬೇಕಿದೆ
IPL Playoffs: ನಿನ್ನೆ (ಮೇ.18) ಚೆಪಾಕ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು 5 ವಿಕೆಟ್ಗಳ ಹೀನಾಯ ಸೋಲಿನಿಂದ ಪ್ಲೇಆಫ್ ಪ್ರವೇಶಿಸುವ ಸುಲಭ ಅವಕಾಶವನ್ನು ಕೈಚೆಲ್ಲಿದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕ್ರಿಕೆಟ್ ಪ್ರಿಯರು ಭಾರೀ ಬೇಸರ ಹೊರಹಾಕಿದ್ದಾರೆ.
ನಿರ್ಣಾಯಕ ಪಂದ್ಯದಲ್ಲಿ ಕಡೆಗೂ ಸಿಎಸ್ಕೆ ಸೋಲಿನ ಹಾದಿ ಹಿಡಿಯುವ ಮೂಲಕ ಪ್ಲೇಆಫ್ ರೇಸ್ನಿಂದ ದೂರ ಸರಿಯಿತು. ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಸಿಎಸ್ಕೆ ನೀಡಿದ್ದ 181 ರನ್ಗಳ ಗುರಿಯನ್ನು ಎಸ್ಆರ್ಎಚ್ ಸುಲಭವಾಗಿ ತಲುಪಿ, ಅಂಕಪಟ್ಟಿಯ ಅಗ್ರ ನಾಲ್ಕರಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿತು. ಈ ಪಂದ್ಯದಲ್ಲಿ ಸಿಎಸ್ಕೆ ಸೋತಿದ್ದರೂ ಪ್ಲೇಆಫ್ ಕನಸು ಇನ್ನೂ ಛಿದ್ರವಾಗಿಲ್ಲ ಎಂಬುದಕ್ಕೆ ಈ ಲೆಕ್ಕಾಚಾರವೇ ಸಾಕ್ಷಿ.
ಈಗಾಗಲೇ ಐಪಿಎಲ್ ಅಂಕಪಟ್ಟಿಯ ಅಗ್ರ ಮೂರು ಸ್ಥಾನಗಳಲ್ಲಿ ಮೊದಲು ಆರ್ಸಿಬಿ, ದ್ವಿತೀಯ ಗುಜರಾತ್ ಟೈಟಾನ್ಸ್ ಮತ್ತು ಮೂರನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಗಳಿವೆ. ಈಗ ಉಳಿದಿರುವುದು ಒಂದೇ ಒಂದು ಸ್ಥಾನ. ಅದಕ್ಕೆ ಮೂರು ಟೀಮ್ಗಳು ರೇಸ್ನಲ್ಲಿವೆ. ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್. ಈ ಮೂವರಲ್ಲಿ ಉಳಿದ ಪಂದ್ಯಗಳನ್ನು ಪಂಜಾಬ್ ಮತ್ತು ಆರ್ಆರ್ ಸೋತರೆ, ಖಂಡಿತ ಚೆನ್ನೈ ಪಡೆಗೆ ಪ್ಲೇಆಫ್ ಕನಸು ಈಡೇರಲಿದೆ. ಆದ್ರೆ, ಇದೊಂದು ನಡೆಯಲೇಬೇಕು.
ರಾಜಸ್ಥಾನ ರಾಯಲ್ಸ್ಗೆ ಎರಡು ಪಂದ್ಯಗಳಿದ್ದು, ಸಿಎಸ್ಕೆ ಮತ್ತು ಪಂಜಾಬ್ ಕಿಂಗ್ಸ್ಗೆ ತಲಾ ಒಂದು ಪಂದ್ಯಗಳು ಆಡಲು ಬಾಕಿ ಉಳಿದಿವೆ. ಈಗ, ಅದರಲ್ಲಿ ಆರ್ಆರ್ 2ಕ್ಕೆ ಎರಡು ಪಂದ್ಯ ಮತ್ತು ಶ್ರೇಯಸ್ ಅಯ್ಯರ್ ಪಡೆ ಒಂದು ಪಂದ್ಯದಲ್ಲಿ ಸೋಲಬೇಕು. ಇಷ್ಟೇ ಅಲ್ಲ, ಇದು ಸಂಭವಿಸುವುದರ ಜೊತೆಗೆ ಮುಂದಿನ ಹಾಗೂ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ಎಲ್ಎಸ್ಜಿ ವಿರುದ್ಧ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್ಗೆ ಸಿಂಹದಂತೆ ಎಂಟ್ರಿ ಕೊಡಬಹುದು. ಇಲ್ಲವೇ, ವಿಜಿಲ್ ಪೋಡು, ಮನೆಗೆ ಓಡು ಎಂದು ಸುಮ್ಮನಾಗಬೇಕಷ್ಟೇ.