ಎಬಿ ಡಿವಿಲಿಯರ್ಸ್ ಜೊತೆ ಯುಜ್ವೇಂದ್ರ ಚಹಲ್
- ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಲೀಗ್ ಆರಂಭಕ್ಕೂ ಮುನ್ನ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮನದಾಳ
- ಎಬಿಡಿ ಜೊತೆ ಪಾಡ್ಕಾಸ್ಟ್ನಲ್ಲಿ ಮುಕ್ತ ಮಾತು
ನವದೆಹಲಿ: ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ (IPL 2026) ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಕಿಕ್ಸ್ಟಾರ್ಟ್ ಪಂದ್ಯ ನಡೆಯಲಿದೆ. ಪ್ರತಿವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ನ ಶುಭಾರಂಭ ಪಂದ್ಯದಲ್ಲಿ, ಯಾವ ತಂಡ ಇರುತ್ತದೆಯೋ ಇಲ್ಲವೋ, ಆದರೆ, ಆರ್ಸಿಬಿ ಸ್ಥಾನವಂತು ಖಚಿತ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಭಾರೀ ಸಂತಸ. ಕಳೆದ ವರ್ಷ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುತ್ತಿಟ್ಟಂತೆ 19ನೇ ಸೀಸನ್ನ ಚಾಂಪಿಯನ್ಸ್ ಪಟ್ಟವು ಆರ್ಸಿಬಿ ಪಾಲಾಗಲಿ ಎಂಬ ಆರೈಕೆಗಳು ತಂಡದ ಅಭಿಮಾನಿಗಳದ್ದು. ಹೀಗಿರುವಾಗಲೇ, ಆರ್ಸಿಬಿಯ ಮಾಜಿ ಸ್ಪಿನ್ನರ್ ನೀಡಿರುವ ಹೇಳಿಕೆಗಳು ಸದ್ಯ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.
ಪ್ರಸ್ತುತ, ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಲ್, ಈ ಬಾರಿಯ ಐಪಿಎಲ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆರ್ಸಿಬಿ ಪರ ಅತ್ಯಧಿಕ ವಿಕೆಟ್ಗಳನ್ನು ಪಡೆದು ಮಿಂಚಿರುವ ಚಹಲ್, 19ನೇ ಆವೃತ್ತಿಯಲ್ಲಿ ಪಂಜಾಬ್ ಪರ ಹೆಚ್ಚೆಚ್ಚು ವಿಕೆಟ್ಗಳನ್ನು ಪಡೆಯುವ ಉತ್ಸಾಹದಲ್ಲಿದ್ದಾರೆ. ಇನ್ನೇನು ಲೀಗ್ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇರುವಂತೆ, ಆರ್ಸಿಬಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನಲ್ನ ಮಾತುಕತೆಯಲ್ಲಿ ಭಾಗಿಯಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿದರು.
"ನಾನು ಕುಡಿತವನ್ನು ಸಂಪೂರ್ಣವಾಗಿ ಬಿಟ್ಟಿದ್ದೇನೆ. ಅದನ್ನೆಲ್ಲ ಬಿಟ್ಟೆ ಇಂದಿಗೆ ಆರು ತಿಂಗಳು ಕಳೆದಿವೆ. ಈಗ ನನ್ನ ವಯಸ್ಸು 35. ಹಿಂದಿನಕ್ಕಿಂತ ಹೆಚ್ಚಾಗಿ ಆಕ್ಟೀವ್ ಆಗಿರಬೇಕು. ತಂಡಕ್ಕೆ ಶೇ.150ಕ್ಕಿಂತ ಹೆಚ್ಚು ಪಟ್ಟು ಕೊಡುಗೆ ನೀಡುವುದೇ ನನ್ನ ಮುಖ್ಯ ಗುರಿ. ಜೊತೆಗೆ ಒಬ್ಬ ಹಿರಿಯ ಆಟಗಾರನಾಗಿ, ನನ್ನಿಂದ ಇತರೆ ಕ್ರಿಕೆಟಿಗರು ಏನಾದರೂ ಕಲಿಯಬೇಕು" ಎಂದರು.
"18ನೇ ಆವೃತ್ತಿಯ ಫೈನಲ್‌ನಲ್ಲಿ ನಾವು ಮಾರ್ಕೋ ಜೆನ್ಸೆನ್ ಅವರ ಅನುಪಸ್ಥಿತಿಯಲ್ಲಿ ಆಡಿದೆವು. ಅವರಿದಿದ್ದರೆ, ಖಂಡಿತ ಚಾಂಪಿಯನ್ಸ್ ಪಟ್ಟ ನಮ್ಮದೇ ಆಗ್ತಿತ್ತು. ಇಡೀ ಟೂರ್ನಿಯಲ್ಲಿ ಅವರ ಬೌಲಿಂಗ್ ಅದ್ಭುತವಾಗಿತ್ತು. ಒಳ್ಳೆಯ ಪ್ರದರ್ಶನ ಕೂಡ ನೀಡಿದರು. ಅದು ಬ್ಯಾಟಿಂಗ್ನಲ್ಲಿ ಕೂಡ. ಕೊನೆಯ ಓವರ್ಗಳಲ್ಲಿ 2ರಿಂದ 3 ಸಿಕ್ಸರ್ಗಳನ್ನು ಸಿಡಿಸುವ ಸಾಮರ್ಥ್ಯವಿತ್ತು. ಅವರ ಬೌಲಿಂಗ್ನಿಂದ ತಂಡದಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಿದೆ. ಎದುರಾಳಿ ಟೀಮ್ನ ಆರಂಭಿಕ ಬ್ಯಾಟರ್ಗಳಿಗೆ ಅದು ಅಷ್ಟು ಸುಲಭದ ಮಾತಲ್ಲ" ಎಂದರು.
"ನನ್ನ ಬಗ್ಗೆಯೇ ನನಗೆ ಬೇಸರವಿದೆ. ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಸ್ವಲ್ಪ ನಿರಾಶೆಯಾಯಿತು. ನನಗೆ ಪಕ್ಕೆಲುಬು ಮುರಿಯಿತು. ಜೊತೆಗೆ ಬೆರಳಿನ ಮೂಳೆ ಕೂಡ ಮುರಿದುಹೋಯಿತು. ಆದ್ದರಿಂದ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ತಂಡದ ಪರ ಆಡಲು ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ, ನಾನು ಮೊದಲು ನನ್ನ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).