ಅಂಡರ್​-19 ವಿಶ್ವಕಪ್​ ಗೆದ್ದ ಭಾರತ ತಂಡ 
ಕ್ರಿಕೆಟ್

ಸಿಎಂ, ವಿರಾಟ್​.... 6ನೇ ಬಾರಿಗೆ ಅಂಡರ್​-19 ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

ಪ್ರಮುಖ ಮುಖ್ಯಾಂಶಗಳು

  • ಆರನೇ ಬಾರಿಗೆ ಅಂಡರ್​-19 ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾ
  • ಇಂಗ್ಲೆಂಡ್​ ವಿರುದ್ಧ 100 ರನ್​ಗಳ ಐತಿಹಾಸಿಕ ಜಯ
  • ದಾಖಲೆಯ ಗೆಲುವಿಗೆ ವಿರಾಟ್​ ಕೊಹ್ಲಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಅಭಿನಂದನೆ
ಜಿಂಬಾಬ್ವೆ: ಇಂದು (ಫೆ.06) ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ 100 ರನ್​ಗಳ ಅಂತರದಲ್ಲಿ ದಾಖಲೆಯ ಗೆಲುವು ಸಾಧಿಸಿತು. ಆರನೇ ಬಾರಿಗೆ ವಿಶ್ವಕಪ್​ ಟ್ರೋಫಿ ಎತ್ತಿಹಿಡಿದ ಯುವ ಭಾರತ ತಂಡಕ್ಕೆ ಕ್ರಿಕೆಟ್​, ಚಿತ್ರೋದ್ಯಮ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.
ತಂಡದ ಪರ ಭರ್ಜರಿ ಶತಕ ಸಿಡಿಸುವ ಮೂಲಕ ಫೈನಲ್​ನಲ್ಲಿ ಸ್ಫೋಟಕ ಇನ್ನಿಂಗ್ಸ್ ನೀಡಿದ ವೈಭವ್ ಸೂರ್ಯವಂಶಿಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಫೈನಲ್​ ಪಂದ್ಯದಲ್ಲಿ, ಸೂರ್ಯವಂಶಿ ಅವರು ರಾಲ್ಫಿ ಆಲ್ಬರ್ಟ್ ಬೌಲಿಂಗ್‌ನಲ್ಲಿ ಸಿಂಗಲ್ ಗಳಿಸುವ ಮೂಲಕ ಕೇವಲ 55 ಎಸೆತಗಳಲ್ಲಿ ಶತಕ ದಾಖಲಿಸಿದರು. ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ ಸೆಂಚುರಿ ದಾಖಲಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇಲ್ಲಿವೆ ಗಣ್ಯರ ಟ್ವೀಟ್​

ಭಾರತದ ಕ್ರಿಕೆಟ್ ಪ್ರತಿಭೆಗಳು ಮಿಂಚುತ್ತಿದ್ದಾರೆ. ವಿಶ್ವಕಪ್ ಗೆದ್ದ ನಮ್ಮ ಅಂಡರ್-19 ತಂಡದ ಬಗ್ಗೆ ಹೆಮ್ಮೆ ಇದೆ. ತಂಡವು ಟೂರ್ನಿ ಪೂರ ಉತ್ತಮವಾಗಿ ಆಡಿದೆ. ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದೆ. ಈ ಗೆಲುವು ಹಲವಾರು ಯುವ ಕ್ರೀಡಾಪಟುಗಳಿಗೂ ಸ್ಫೂರ್ತಿ ನೀಡುತ್ತದೆ. ಆಟಗಾರರ ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

"ದಾಖಲೆಯ 6ನೇ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಈ ಗಮನಾರ್ಹ ಸಾಧನೆಯು ಶಿಸ್ತು, ತಂಡದ ಕಾರ್ಯ ಮತ್ತು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯ ಬಲವನ್ನು ಪ್ರತಿಬಿಂಬಿಸುತ್ತದೆ. ವೈಭವ್ ಸೂರ್ಯವಂಶಿ ಅವರ 175 ರನ್‌ಗಳ ಅಸಾಧಾರಣ ಇನ್ನಿಂಗ್ಸ್‌ಗಾಗಿ ವಿಶೇಷ ಮೆಚ್ಚುಗೆ. ಇದು ಒಂದು ಪೀಳಿಗೆಗೆ ಸ್ಫೂರ್ತಿ ನೀಡುವ ಪ್ರದರ್ಶನ. ದೇಶದ ಆಕಾಂಕ್ಷೆಗಳನ್ನು ಆತ್ಮವಿಶ್ವಾಸದಿಂದ ಕೊಂಡೊಯ್ಯುವುದನ್ನು ಭಾರತದ ಯುವಕರು ಮುಂದುವರಿಸಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.

ಸಚಿನ್ ತೆಂಡೂಲ್ಕರ್​

"ಚಾಂಪಿಯನ್ಸ್! ಈ ಯುವ ತಂಡ ಮತ್ತು ಅವರಾಡಿದ ನಿರ್ಭೀತ ಕ್ರಿಕೆಟ್ ಬಗ್ಗೆ ತುಂಬಾ ಹೆಮ್ಮೆಯಿದೆ. ಟ್ರೇನರ್​ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ತಂಡಕ್ಕೆ ಶುಭಾಶಯಗಳು. ಗೆಲುವಿನ ಕ್ಷಣವನ್ನು ಆನಂದಿಸಿ. ಸೂರ್ಯವಂಶಿ ಇದ್ದಾಗ, ಬ್ಲಾಕ್ಬಸ್ಟರ್ ಪಕ್ಕಾ ಎಂದು ನಿರೀಕ್ಷಿಸಿದ್ದೆ. ಅಭಿನಂದನೆಗಳು, ವೈಭವ್" ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಬರೆದಿದ್ದಾರೆ.

ವಿರಾಟ್​ ಕೊಹ್ಲಿ

"ಮತ್ತೊಮ್ಮೆ ವಿಶ್ವಕಪ್ ಗೆದ್ದ ಅಂಡರ್-19 ಭಾರತ ತಂಡಕ್ಕೆ ಅಭಿನಂದನೆಗಳು. ವಯೋಮಾನದ ಕ್ರಿಕೆಟ್ ಮತ್ತು ಅದರಾಚೆಗಿನ ಕ್ಷೇತ್ರಗಳಲ್ಲಿ ನಮ್ಮ ಪ್ರಾಬಲ್ಯ ಮುಂದುವರೆದಿದೆ. ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಶುಭಾಶಯಗಳು" ಎಂದು ವಿರಾಟ್​ ಕೊಹ್ಲಿ ತಮ್ಮ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಕುಮಾರ ಸಂಗಕ್ಕಾರ

"ವಿಶ್ವಕಪ್ ಫೈನಲ್‌ನಲ್ಲಿ ಶತಕ ಯಾವಾಗಲೂ ವಿಶೇಷವೇ. ವೈಭವ್ 80 ಎಸೆತಗಳಲ್ಲಿ 175 ರನ್ ಗಳಿಸಿದ್ದು ನಿಜಕ್ಕೂ ಅದ್ಭುತ. ಇದರೊಂದಿಗೆ ಬಿಗ್ ಬೌಂಡರಿಗಳು ಕೂಡ" ಎಂದು ಮಾಜಿ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ ಅಭಿನಂದಿಸಿದ್ದಾರೆ.