ಲಂಕಾದಲ್ಲಿ ಮೈದಾನಕ್ಕಿಳಿಯಲಿದ್ದಾರೆ ನಾಯಕ ಸೂರ್ಯಕುಮಾರ್ 
ಕ್ರಿಕೆಟ್

ಪಾಕಿಸ್ತಾನ​ ಆಡದಿದ್ರೂ ಫೆ.15ರಂದು ಲಂಕಾದಲ್ಲಿ ಮೈದಾನಕ್ಕಿಳಿಯಲಿದ್ದಾರೆ ನಾಯಕ ಸೂರ್ಯಕುಮಾರ್! ಕಾರಣವೇನು? Pakistan

ಪ್ರಮುಖ ಮುಖ್ಯಾಂಶಗಳು

  • ಫೆ.7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಮೆಗಾ ಟೂರ್ನಿಗೆ ದಿನಗಣನೆ ಆರಂಭ
  • ಈ ಐತಿಹಾಸಿಕ ಟೂರ್ನಿಗಾಗಿ ಎಲ್ಲ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ
  • ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ
  • ಪಾಕಿಸ್ತಾನ​ ಆಡದಿದ್ರೂ ಫೆ.15ರಂದು ಲಂಕಾದಲ್ಲಿ ಮೈದಾನಕ್ಕಿಳಿಯಲಿದ್ದಾರೆ ನಾಯಕ ಸೂರ್ಯಕುಮಾರ್
ನವದೆಹಲಿ: ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ( Pakistan ) ನಡುವಿನ ಪಂದ್ಯದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಪಾಕಿಸ್ತಾನ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವಾಗಿದೆ. ಅದೇನೆಂದರೆ, ಟೀಮ್​ ಇಂಡಿಯಾ ವಿರುದ್ಧದ ಗ್ರೂಪ್​ ಪಂದ್ಯವನ್ನು ಆಡದೇ ಇರಲು ಪಾಕ್​ ನಿರ್ಧಾರ ಮಾಡಿದೆ. ಇದರಿಂದಾಗಿ ಫೆ. 15ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಪಂದ್ಯಕ್ಕೆ ಅನಿಶ್ಚಿತತೆ ಎದುರಾಗಿದೆ. ಒಂದು ವೇಳೆ ಈ ಪಂದ್ಯ ನಡೆಯದೇ ಹೋದರೂ ಅಂದು ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ಅವರು ಮೈದಾನಕ್ಕೆ ಇಳಿಯಲಿದ್ದಾರೆ.
ಇದನ್ನು ಕೇಳಿ ನಿಮಗೆ ಆಶ್ಚರ್ಯ ಎನಿಸಬಹುದು. ಏಕೆಂದರೆ, ಪಂದ್ಯವೇ ನಡೆಯದಿದ್ದಾಗ ನಾಯಕನಿಗೆ ಮೈದಾನದಲ್ಲಿ ಏನು ಕೆಲಸ ಅನ್ನೋ ಪ್ರಶ್ನೆ ಎದುರಾಗಬಹುದು. ಆದರೆ, ಒಂದು ಕಾರಣವಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ( ICC ) ಆಯೋಜನೆ ಮಾಡುತ್ತಿರುವ ಮೆಗಾ ಟೂರ್ನಮೆಂಟ್​ ಆಗಿರುವುದರಿಂದ ಎಲ್ಲದಕ್ಕೂ ಒಂದು ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರದಂತಯೇ ಎಲ್ಲವು ನಡೆಯಬೇಕು.
ಫೆ.15ರಂದು ಶ್ರೀಲಂಕಾದ ಕೊಲೊಂಬೋದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್​ ಪಂದ್ಯ ಫಿಕ್ಸ್​ ಆಗಿದೆ. ಆದರೆ, ಆ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದೆ. ಆದರೂ, ಟೀಮ್ ಇಂಡಿಯಾ, ಶಿಷ್ಟಾಚಾರದ ಪ್ರಕಾರವೇ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ. ಫೆ. 15ರಂದು ನಿಗದಿಯಂತೆಯೇ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್, ಮೈದಾನಕ್ಕೆ ಇಳಿದು ಟಾಸ್​ಗಾಗಿ ಎದುರು ನೋಡುತ್ತಾರೆ. ಒಂದು ವೇಳೆ ಪಾಕಿಸ್ತಾನದ ನಾಯಕ ಸಲ್ಮಾನ್​ ಅಲಿ ಅಘಾ ಮೈದಾನಕ್ಕೆ ಹಾಜರಾಗುವಲ್ಲಿ ವಿಫಲವಾದರೆ, ಆ ಪಂದ್ಯವನ್ನು ವಾಕ್​ ಓವರ್​ ಎಂದು ಘೋಷಣೆ ಮಾಡಲಾಗುತ್ತದೆ. ಆಗ ಭಾರತಕ್ಕೆ ಎರಡು ಅಂಕಗಳು ಮತ್ತು ಪಾಕಿಸ್ತಾನಕ್ಕೆ ಶೂನ್ಯ ಅಂಕಗಳು ಸಿಗಲಿವೆ.
ಅಂದಹಾಗೆ, ಪಾಕಿಸ್ತಾನದ ಈ ನಿರ್ಧಾರ ಕೇವಲ ಅಂಕಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ನೆಟ್​ ರನ್​ ರೇಟ್​ (NRR) ಮೇಲೂ ನೆಗೆಟಿವ್​ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಅರ್ಹತೆಯನ್ನು ನಿರ್ಧರಿಸುವಲ್ಲಿ ನೆಟ್​ ರನ್​ ರೇಟ್​ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಸಮಸ್ಯೆಯಾಗಲಿದೆ. ಗ್ರೂಪ್​ A ನಲ್ಲಿ ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್, ನಮೀಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿವೆ. ಈ ಗ್ರೂಪ್​ನ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಭಾರತ-ಪಾಕ್ ಪಂದ್ಯದಿಂದ ಭಾರತ ಎರಡು ಅಂಕಗಳನ್ನು ಪಡೆದರೆ, ಉಳಿದ ಪಂದ್ಯಗಳನ್ನು ಹೆಚ್ಚಿನ ಒತ್ತಡವಿಲ್ಲದೆ ಆಡಲು ಸಾಧ್ಯವಾಗುತ್ತದೆ. ಟೀಮ್ ಇಂಡಿಯಾ ತನ್ನ ನಿವ್ವಳ ರನ್ ದರವನ್ನು ಸುಧಾರಿಸುವತ್ತ ಗಮನಹರಿಸಬಹುದು.
ಆದರೆ, ಪಾಕಿಸ್ತಾನಕ್ಕೆ ಪ್ರತಿ ಪಂದ್ಯವೂ 'ಮಾಡು ಇಲ್ಲವೇ ಮಡಿ' ಎಂಬಂತಾಗುತ್ತದೆ. ಭಾರತದ ವಿರುದ್ಧ ಆಡದೆ ಸಂಭಾವ್ಯ ಅಂಕಗಳನ್ನು ಕಳೆದುಕೊಳ್ಳುವ ಪಾಕಿಸ್ತಾನ, ಉಳಿದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ನೆದರ್ಲ್ಯಾಂಡ್ಸ್, ಅಮೆರಿಕ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳನ್ನು ಗೆಲ್ಲುವ ಗುರಿಯೊಂದಿಗೆ ಟೂರ್ನಿಗೆ ಪ್ರವೇಶಿಸಬೇಕಾಗುತ್ತದೆ. ಸೂಪರ್ 8 ಹಂತಕ್ಕೆ ಪ್ರವೇಶಿಸಲು ಪಾಕಿಸ್ತಾನ ಈ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅವರು ಕೇವಲ ಎರಡು ಪಂದ್ಯಗಳನ್ನು ಗೆದ್ದರೆ, ಅವರ ಅರ್ಹತೆಯು ನೆಟ್​ ರನ್​ ರೇಟ್​ ಮತ್ತು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ. ಆದರೆ, ಭಾರತದ ವಿರುದ್ಧ ಆಡದೇ ಹೋದರೆ ನೆಟ್​ ರನ್​ ರೇಟ್​ ಪರಿಸ್ಥಿತಿ ಕಷ್ಟಕರವಾಗುತ್ತದೆ. ಅವರು ಈ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದರೆ, ಗ್ರೂಪ್​ ಹಂತದಲ್ಲೇ ಪಂದ್ಯಾವಳಿಯಿಂದ ನಿರ್ಗಮಿಸಬೇಕಾಗುತ್ತದೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಅಮೆರಿಕ ವಿರುದ್ಧ ಸೋತಿದ್ದು ಗೊತ್ತೇ ಇದೆ. ಆದ್ದರಿಂದ, ಈ ಬಾರಿಯೂ ಉಳಿದ ಪಂದ್ಯಗಳನ್ನು ಗೆಲ್ಲುವುದು ಸುಲಭವಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯ ಯಾವಾಗಲೂ ವಿಶ್ವಕಪ್‌ನ ಪ್ರಮುಖ ಆಕರ್ಷಣೆಯಾಗಿದೆ. ಕೋಟ್ಯಂತರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಈ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರ, ಪಾಕಿಸ್ತಾನಕ್ಕೆ ಭಾರಿ ನಷ್ಟವನ್ನು ಉಂಟು ಮಾಡಲಿದೆ, (ಏಜೆನ್ಸೀಸ್​).