ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್
- ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 78 ರನ್ಗಳನ್ನು ಸಿಡಿಸಿದ ವೈಭವ್ ಸೂರ್ಯವಂಶಿ
- ತಂಡದ ಸಹ ಆಟಗಾರನ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡ ಪರಾಗ್
Vaibhav Suryavanshi: ನಿನ್ನೆ (ಏ.10) ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ರಾಜಸ್ಥಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೈಭವ್ ಸೂರ್ಯವಂಶಿ, ಕೇವಲ 25 ಎಸೆತಗಳಲ್ಲಿ 78 ರನ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ನೀಡಿದರು. ವೈಭವ್ ಸ್ಫೋಟಕ ಆಟಕ್ಕೆ ಸ್ವತಃ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.
ಆರ್‌ಸಿಬಿ ನೀಡಿದ 202 ರನ್‌ಗಳ ಗುರಿಯನ್ನು ಬೆನ್ನತ್ತಿದ ಸಂದರ್ಭದಲ್ಲಿ 78 ರನ್ ಬಾರಿಸಿದ ಸೂರ್ಯವಂಶಿ ತಮ್ಮ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಐಪಿಎಲ್ 19ನೇ ಆವೃತ್ತಿಯ ಕೇವಲ ನಾಲ್ಕು ಪಂದ್ಯಗಳಲ್ಲಿ 200 ರನ್ ಗಳಿಸಿರುವ ವೈಭವ್, ಅತ್ಯಧಿಕ ರನ್ ಹೊಂದಿರುವ ಬ್ಯಾಟರ್ ಆಗಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಸೀಸನ್ನಿಂದಲೇ 15 ವರ್ಷದ ಬೇಬಿ ಬಾಸ್ಗೆ ಕ್ರಿಕೆಟ್ ಪ್ರಿಯರು ಮಾತ್ರವಲ್ಲದೇ, ಅನೇಕರು ಅಭಿಮಾನಿಗಳಾಗಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ವೈಭವ್ ಸೂರ್ಯವಂಶಿಗೆ ಫಾಲೋವರ್ಸ್ ಆಗಿದ್ದಾರೆ. ಇದು ಆತನ ಬೆಳವಣಿಗೆ ಹಾಗೂ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಈ ಮಧ್ಯೆ, ಸತತವಾಗಿ ತಮ್ಮ ತಂಡದ ಗೆಲುವಿಗೆ ಕಾರಣವಾಗತ್ತಿರುವ ವೈಭವ್ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಕೆಲವು ಕುತೂಹಲಕಾರಿ ವಿಷಯಗಳನ್ನೇ ಹಂಚಿಕೊಂಡಿದ್ದಾರೆ.
ಪಂದ್ಯ ಗೆದ್ದ ಖುಷಿಯಲ್ಲಿ ಮಾತನಾಡಿದ ಪರಾಗ್, "ವೈಭವ್ ಸೂರ್ಯವಂಶಿ ತುಂಬಾ ಮೋಜಿನ ವ್ಯಕ್ತಿ. ತಂಡದಲ್ಲಿರುವ ಪ್ರತಿಯೊಬ್ಬರೂ ಈತನನ್ನು ಬಹಳ ಇಷ್ಟಪಡುತ್ತಾರೆ. ಆತನಿಗೆ ಅಧಿಕ ಸಂಖ್ಯೆಯಲ್ಲಿ ಫ್ಯಾನ್ಸ್ಗಳಿದ್ದಾರೆ. ಸೂರ್ಯವಂಶಿಗೆ ತಿನ್ನುವುದು ಎಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ, ಆಗಾಗ್ಗೆ ಹೊರಗೆ ಹೋಗಲು ಬಯಸುತ್ತಾರೆ. ವೈಭವ್ಗೆ ನೆಚ್ಚಿನ ಫುಡ್ಗಳನ್ನು ನಮ್ಮ ತಂಡದ ಪರವಾಗಿ ನಾವೇ ಮೊದಲೇ ವ್ಯವಸ್ಥೆ ಮಾಡುತ್ತೇವೆ. ಆಡುವಾಗಲೂ ಅಷ್ಟೇ, ವೈಭವ್ ತಮ್ಮ ಬ್ಯಾಟಿಂಗ್ ಎಂಜಾಯ್ ಮಾಡ್ತಾರೆ. ಈ ನಿಟ್ಟಿನಲ್ಲಿ, ನಾವು ಕೂಡ ಹೆಚ್ಚೆಚ್ಚು ಅವಕಾಶಗಳನ್ನು ಅವರಿಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).