ಅಕ್ರಮವಾಗಿ ಐಪಿಎಲ್ ಟಿಕೆಟ್ ಮಾರಿದ ವ್ಯಕ್ತಿ ಅರೆಸ್ಟ್
- ಆರ್‌ಸಿಬಿ ಪಂದ್ಯ ನೋಡಲು ಬಂದ ಅಭಿಮಾನಿಗಳಿಗೆ ಮೋಸ
- ಅಕ್ರಮವಾಗಿ ಮಾರಾಟ ಮಾಡಿದ ಒಂದೊಂದು ಟಿಕೆಟ್ ಬೆಲೆ ಕೇಳಿದ್ರೆ ಬೆರಗಾಗ್ತೀರಾ
- ಆರೋಪಿ ಚಂದ್ರಶೇಖರ್ ಸದ್ಯ ಪೊಲೀಸರ ಬಲೆಗೆ
ಬೆಂಗಳೂರು: ಐಪಿಎಲ್ ಅಭಿಮಾನಿಗಳಿಗೆ ಆಯಾ ಫ್ರಾಂಚೈಸಿಗಳು ಎಷ್ಟೇ ಬುದ್ಧಿ ಹೇಳಿದರೂ ಪ್ರಯೋಜವಿಲ್ಲ ಎನ್ನುವುದಕ್ಕೆ ಈ ಪ್ರಕರಣವೇ ಜ್ವಲಂತ ಸಾಕ್ಷಿ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ಸಿಬ್ಬಂದಿಯೊಬ್ಬ ಬರೋಬ್ಬರಿ 180ಕ್ಕೂ ಅಧಿಕ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ವಿಚಾರ ಇದೀಗ ಪೊಲೀಸರಿಂದ ಬಯಲಿಗೆ ಬಂದಿದೆ.
ಐಪಿಎಲ್ ಟಿಕೆಟ್‌ಗಳನ್ನು ನಿಗದಿಗಿಂತ ಮೂರು ಪಟ್ಟು ಹಣಕ್ಕೆ ಐಪಿಎಲ್ ಅಭಿಮಾನಿಗಳಿಗೆ ಮಾರಾಟ ಮಾಡಿರುವ ಆರೋಪ ಈತನ ಮೇಲೆ ಕೇಳಿಬಂದಿದೆ. ಪ್ರಕರಣ ಬೆನ್ನತ್ತಿದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅಧಿಕೃತ ಟಿಕೆಟ್ ಹಂಚಿಕೆ ಮಾಡುವವರ ಸಂಪರ್ಕವಿಲ್ಲದೆ, ಇಂಥಾ ಬ್ಲ್ಯಾಕ್ ಮಾರ್ಕೆಟ್ ದಂಧೆ ನಡೆಯದು ಎಂದು ತಿಳಿಸಲಾಗಿದೆ.
ಆರೋಪಿಯನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಸ್ಟೇಡಿಯಂ ಒಳಗಿರುವ ಲಕ್ಷ್ಮಿ ಕ್ಯಾಂಟೀನ್‌ನಲ್ಲಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪ್ರತಿ ಟಿಕೆಟ್‌ಗೆ 15,000ದಿಂದ 19,000 ರೂ. ಬೆಲೆಗೆ 180ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾಗಿ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 15ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಖನೌ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಸಂಭವಿಸಿದ ಘಟನೆಯಿದು. ಈ ಪಂದ್ಯಕ್ಕೆ ಹೆಚ್ಚಿನ ಡಿಮಾಂಡ್ ಇತ್ತು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ವ್ಯಕ್ತಿ, ಬಹುತೇಕ ಟಿಕೆಟ್‌ಗಳನ್ನು 15 ಸಾವಿರಕ್ಕೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಪೊಲೀಸರು ಕ್ರೀಡಾಂಗಣದ ಆವರಣದಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಪ್ರಶ್ನಿಸಿದಾಗ, ಚಂದ್ರಶೇಖರ್ ಸುಳಿವು ಸಿಕ್ಕಿದೆ.
ಏಪ್ರಿಲ್ 15ರ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್ ಟಿಕೆಟ್‌ಜೆನಿ ಮೂಲಕ ಖರೀದಿಸಲಾಗಿದೆ ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಮತ್ತು ಇಂಡಸ್ಟ್ರಿಯಲ್ ಆಟೊಮೇಷನ್ ಕನ್ಸಲ್ಟೆಂಟ್ ಕಂಪನಿಯ ಹೆಸರಿನಲ್ಲಿ ಟಿಕೆಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗಿದ್ದು, ಧರಣಿ ಕಂಪ್ಯೂಟರ್ಸ್ ಸಂಸ್ಥೆಯ ಹೆಸರಿನಲ್ಲಿ 50 ಟಿಕೆಟ್‌ಗಳನ್ನು ಪಡೆಯಲಾಗಿದೆ. ಇದಾದ ಬಳಿಕ ಇವುಗಳನ್ನು ಬೇರೆಡೆಗೆ ತಿರುಗಿಸಿ ಸಾಮಾನ್ಯ ದರಕ್ಕಿಂತ ಮೂರ ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ, ಟಿಕೆಟ್‌ಗಳನ್ನು ಕೆಎಸ್‌ಸಿಎ ಸದಸ್ಯ ಗಣೇಶ್ ಪರೀಕ್ಷಿತ್ ಪೂರೈಸಿದರು. ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸೂಚಿಸಿದರು ಎಂದು ಚಂದ್ರಶೇಖರ್ ಹೇಳಿರುವುದಾಗಿ ವರದಿಯಾಗಿದೆ. ಪ್ರಸ್ತುತ ಪರೀಕ್ಷಿತ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಕ್ರಮ ಟಿಕೆಟ್ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ,(ಏಜೆನ್ಸೀಸ್).