BWF World Championships: ತ್ರೀಸಾ-ಗಾಯತ್ರಿ ಜೋಡಿಗೆ ಕಂಚಿನ ಹಾರ, ಮಗಳ ಸಾಧನೆಗೆ ಪುಲ್ಲೇಲ ಗೋಪಿಚಂದ್ ಸಂತಸ! 
ಕ್ರಿಕೆಟ್

BWF World Championships: ತ್ರೀಸಾ-ಗಾಯತ್ರಿ ಜೋಡಿಗೆ ಕಂಚಿನ ಹಾರ, ಮಗಳ ಸಾಧನೆಗೆ ಪುಲ್ಲೇಲ ಗೋಪಿಚಂದ್ ಸಂತಸ!

ನವದೆಹಲಿ: ಬಿಡಬ್ಲುೃಎಫ್​ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಮಹಿಳಾ ಡಬಲ್ಸ್‌ನಲ್ಲಿ ಆತಿಥೇಯ ಭಾರತದ ಗಾಯತ್ರಿ ಗೋಪಿಚಂದ್ ಹಾಗೂ ತ್ರೀಸಾ ಜೋಲಿ ಜೋಡಿಯ ಅಮೋಘ ಪ್ರದರ್ಶನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿತು. ಶನಿವಾರ ನಡೆದ 4ರ ಘಟ್ಟದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಚೀನಾದ ಲಿಯು ಶೆಂಗು ಶು- ಟನ್ ನಿಂಗ್ ಜೋಡಿ ಎದುರು ಪರಾಭವಗೊಂಡ ಗಾಯತ್ರಿ-ತ್ರೀಸಾ ಜೋಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. 2011ರ ನಂತರ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕವೂ ಇದಾಗಿದ್ದು, ಟೂರ್ನಿಯಲ್ಲಿ ಆತಿಥೇಯರ ಸವಾಲು ಅಂತ್ಯ ಕಂಡಿದೆ.


ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉಪಾಂತ್ಯದಲ್ಲಿ ಶ್ರೇಯಾಂಕ ರಹಿತ ಭಾರತೀಯ ಜೋಡಿ 21-18, 13-21, 8-21 ಗೇಮ್‌ಗಳಿಂದ ಲಿಯು ಶೆಂಗು ಶು- ಟನ್ ನಿಂಗ್ ವಿರುದ್ಧ ಒಂದು ಗಂಟೆ 11 ನಿಮಿಷಗಳ ಹೋರಾಟಯುತ ಕಾದಾಟದಲ್ಲಿ ಸೋಲು ಕಂಡಿತು. ಸೆಮಿೈನಲ್ ಪ್ರವೇಶದೊಂದಿಗೆ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದ ತ್ರೀಸಾ-ಗಾಯತ್ರಿ ಜೋಡಿ ಮೆಡಲ್ ಬಣ್ಣ ಬದಲಾಯಿಸುವ ಅವಕಾಶ ಕೈಚೆಲ್ಲಿತು.
ಜ್ವಾಲಾ ಗುಟ್ಟಾ ಹಾಗೂ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿ ನಂತರ ಕಂಚು ಗೆದ್ದ ಎರಡನೇ ಮಹಿಳಾ ಜೋಡಿಯೂ ಇದಾಗಿದೆ. ತ್ರೀಸಾ-ಗಾಯತ್ರಿ ಜೋಡಿ ಚೀನಾ ಜೋಡಿ ಎದುರಿನ 7 ಮುಖಾಮುಖಿಗಳಲ್ಲಿ ಅನುಭವಿಸಿದ 6ನೇ ಸೋಲು ಇದಾಗಿದೆ. ಮೊದಲ ಗೇಮ್‌ನಲ್ಲಿ ಸುದೀರ್ಘ ರ‌್ಯಾಲಿಯ ಆಟದ ನಡುವೆಯೂ ತ್ರೀಸಾ-ಗಾಯತ್ರಿ ಮೇಲುಗೈ ಸಾಧಿಸಿದರು. ನಂತರ ಎರಡನೇ ಗೇಮ್‌ನ ಮಧ್ಯಂತರದಲ್ಲಿ 10-11ರಿಂದ ಮುನ್ನಡೆ ಸಾಧಿಸಿದ ತ್ರೀಸಾ-ಗಾಯತ್ರಿ ವಿರಾಮದ ನಂತರ ಸಂಪೂರ್ಣವಾಗಿ ಲಯ ತಪ್ಪಿದರು. ಚೀನಾ ಆಟಗಾರ್ತಿಯರ ಆಕ್ರಮಣಕಾರಿ ಆಟಕ್ಕೆ ತ್ರೀಸಾ-ಗಾಯತ್ರಿ ಪ್ರತಿರೋಧ ತೋರಿದರೂ, ಸ್ವಯಂಕೃತ ತಪ್ಪುಗಳು ದುಬಾರಿ ಎನಿಸಿದವು.
ಇಂದು ಫೈನಲ್ಸ್: 17 ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿರುವ ಬಿಡಬ್ಲುೃಎಫ್​ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗೆ ಭಾನುವಾರ ತೆರೆಬೀಳಲಿದೆ. ಪುರುಷರ-ಮಹಿಳೆಯರ ಸಿಂಗಲ್ಸ್, ಡಬಲ್ಸ್ ಜತೆಗೆ ಮಿಶ್ರ ಡಬಲ್ಸ್ ಫೈನಲ್ ಪಂದ್ಯಗಳು ಕೊನೇ ದಿನ ನಡೆಯಲಿವೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ರ‌್ಯಾಂಕಿಂಗ್‌ನ ಅಗ್ರ ಐವರು ಹೊರತಾಗಿ ಹೊಸ ಆಟಗಾರರ ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ.
10. ತ್ರೀಸಾ-ಗಾಯತ್ರಿ ಪದಕ ಸಾಧನೆಯೊಂದಿಗೆ 2011ರಿಂದ ಸತತ 12 ಆವೃತ್ತಿಗಳಲ್ಲಿ ಭಾರತ ಕನಿಷ್ಠ ಒಂದು ಪದಕ ಜಯಿಸಿದಂತಾಗಿದೆ. ಒಟ್ಟಾರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ 10ನೇ ಕಂಚಿನ ಪದಕ ಇದಾಗಿದೆ.
ನಾನು ತರಬೇತಿ ನೀಡುವ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ನೋಡಲು ಬಯಸುತ್ತೇನೆ. ಭಾರತದ ಇತರ ಆಟಗಾರರು ಉತ್ತಮ ಪ್ರದರ್ಶನ ನೀಡಿದಾಗ ಎಂಥ ಸಂತೋಷ ಇರುತ್ತದೆಯೋ, ಮಗಳು ಗಾಯತ್ರಿ ಸಾಧನೆಯಲ್ಲೂ ನನಗೆ ಅಂಥದ್ದೇ ಖುಷಿ ಇದೆ.
ಪುಲ್ಲೇಲ ಗೋಪಿಚಂದ್, ರಾಷ್ಟ್ರೀಯ ಕೋಚ್