ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಗೆದ್ದ ತಂಡದೊಂದಿಗೆ ಬಿ.ವೈ. ವಿಜಯೇಂದ್ರ  
ಕ್ರಿಕೆಟ್

ಚೊಚ್ಚಲ ವಿಶ್ವಕಪ್ ಗೆದ್ದ ಮಹಿಳೆಯ ತಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯಭೇರಿ
  • ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ತವರು ನೆಲದಲ್ಲಿ ಅಭಿನಂದನೆಗಳ ಮಹಾಪೂರ
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದ ಆತ್ಮೀಯ ಸನ್ಮಾನ
ಬೆಂಗಳೂರು: ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿ, ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಿರುವ ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ತವರು ನೆಲದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಂತೆಯೇ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಬೆಂಗಳೂರಿಗೆ ಆಗಮಿಸಿದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಂಸದ ಪಿ.ಸಿ. ಮೋಹನ್ ಅವರು ಮಂಗಳವಾರ ಬೆಳಗ್ಗೆ ಭೇಟಿಯಾಗಿ ಆತ್ಮೀಯವಾಗಿ ಸನ್ಮಾನಿಸಿದರು.
ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಪೂರೈಸಿ ಬೆಂಗಳೂರಿಗೆ ಮರಳಿದ ಭಾರತದ ಹೆಮ್ಮೆಯ ಅಟಗಾರ್ತಿಯರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ ಹೋಟೆಲ್‌ಗೆ ಭೇಟಿ ನೀಡಿದ ವಿಜಯೇಂದ್ರ ಅವರು, ತಂಡದ ಪ್ರತಿಯೊಬ್ಬ ಆಟಗಾರ್ತಿಗೂ ವೈಯಕ್ತಿಕವಾಗಿ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಗೌರವಿಸಿದರು.
ಕೇವಲ ಸನ್ಮಾನಕ್ಕೆ ಸೀಮಿತವಾಗದೆ, ವಿಜಯೇಂದ್ರ ಅವರು ತಂಡದ ಎಲ್ಲ 16 ಆಟಗಾರ್ತಿಯರನ್ನೂ ಒಬ್ಬೊಬ್ಬರಾಗಿ ಪರಿಚಯ ಮಾಡಿಕೊಂಡರು. ಪ್ರತಿಯೊಬ್ಬರ ಹೆಸರನ್ನು ಪ್ರೀತಿಯಿಂದ ಕೇಳಿ ತಿಳಿದುಕೊಂಡು, ಅವರ ಯೋಗಕ್ಷೇಮ ವಿಚಾರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಮೋಹನ್ ಹಾಗೂ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದು, ಆಟಗಾರ್ತಿಯರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಜಗತ್ತಿನ ಎದುರು ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದ ಈ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.

ಮಹಾಂತೇಶ್ ಅವರ ಪರಿಶ್ರಮಕ್ಕೆ ಮೆಚ್ಚುಗೆ

ಆಟಗಾರ್ತಿಯರೊಂದಿಗೆ ಆತ್ಮೀಯವಾಗಿ ಮಾತನಾಡಿದ ವಿಜಯೇಂದ್ರ ಹಾಗೂ ಪಿ.ಸಿ. ಮೋಹನ್ ಅವರು, ವಿಶ್ವಕಪ್ ಗೆಲುವಿನ ರೋಚಕ ಕ್ಷಣಗಳು ಹಾಗೂ ಅವರ ಕಠಿಣ ಪರಿಶ್ರಮದ ಹಾದಿಯನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ದೃಷ್ಟಿ ದೋಷವಿದ್ದರೂ, ಛಲವೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಈ ತಂಡ ಸಾಬೀತುಪಡಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಅಂಧರ ಕ್ರಿಕೆಟ್‌ಗೆ ಬೆನ್ನೆಲುಬಾಗಿ ನಿಂತಿರುವ ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಹಾಗೂ 'ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ' (CABI) ಸಂಸ್ಥೆಯ ಛೇರ್ಮನ್ ಮಹಾಂತೇಶ್ ಕಿವಡಸಣ್ಣವರ್ ಅವರ ಅವಿರತ ಶ್ರಮವನ್ನು ಬಿಜೆಪಿ ನಾಯಕರು ಕೊಂಡಾಡಿದರು.

ನೇಪಾಳದ ವಿರುದ್ಧ ಐತಿಹಾಸಿಕ ಜಯ

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ನೇಪಾಳವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ ತಂಡ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ, ಕೇವಲ 12 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು 117 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದ ಭಾರತದ ವನಿತೆಯರು, ಫೈನಲ್‌ನಲ್ಲೂ ತಮ್ಮ ಪಾರುಪತ್ಯ ಮೆರೆದರು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಫುಲಾ ಸರನ್ ಅವರು 44 ರನ್ ಗಳಿಸಿ ಅಜೇಯರಾಗಿ ಉಳಿದು 'ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೂ ಭಾಜನರಾಗಿದ್ದರು.

ಪ್ರಧಾನಿ ಮೋದಿಯಿಂದಲೂ ಶಹಬ್ಬಾಸ್‌ಗಿರಿ

ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಂಡದ ಸಾಧನೆಯನ್ನು ಎಕ್ಸ್ (ಹಿಂದಿನ ಟ್ವಿಟರ್​) ಮೂಲಕ ಕೊಂಡಾಡಿದ್ದಾರೆ. "ಭಾರತದ ಹೆಮ್ಮೆಯ ಹೆಣ್ಣುಮಕ್ಕಳು ಇತಿಹಾಸ ನಿರ್ಮಿಸಿದ್ದಾರೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಮೂಲಕ ತಂಡದ ಬೆನ್ನು ತಟ್ಟಿದ್ದಾರೆ. ದೇಶದ ಮೂಲೆ ಮೂಲೆಗಳಿಂದ, ರಾಜಕೀಯ ಗಣ್ಯರಿಂದ ಹಾಗೂ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳು ಹರಿದುಬರುತ್ತಿದೆ.