ಕೊಹ್ಲಿಯನ್ನು ವಾಪಸ್​ ಕರೆತಂದು ವೈಭವ್​ ಜತೆ ಬಿಡಿ: ಒಲಿಂಪಿಕ್​ ಪದಕ ಗೆಲ್ಲಲು BCCIಗೆ ಮಾಸ್ಟರ್​ ಪ್ಲ್ಯಾನ್​ ಕೊಟ್ಟ ಶ್ರೀಶಾಂತ್! Vaibhav Suryavanshi  
ಕ್ರಿಕೆಟ್

ಕೊಹ್ಲಿಯನ್ನು ವಾಪಸ್​ ಕರೆತಂದು ವೈಭವ್​ ಜತೆ ಬಿಡಿ: ಒಲಿಂಪಿಕ್​ ಪದಕ ಗೆಲ್ಲಲು BCCIಗೆ ಮಾಸ್ಟರ್​ ಪ್ಲ್ಯಾನ್​ ಕೊಟ್ಟ ಶ್ರೀಶಾಂತ್! Vaibhav Suryavanshi

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್ ಒಲಿಂಪಿಕ್ಸ್‌ಗೆ ಮರಳಲು ಸಂಪೂರ್ಣ ಸಜ್ಜಾಗಿದೆ
  • 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ
  • ಈ ಮಹಾವೇದಿಕೆಯಲ್ಲಿ ಚಿನ್ನದ ಪದಕ ಗೆಲ್ಲಲು ಭಾರತ ತಂಡವು ಬಲಿಷ್ಠ ಸ್ಪರ್ಧಿ ಎಂದು ಪರಿಗಣನೆ
  • ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಬಿಸಿಸಿಐಗೆ ಮಾಸ್ಟರ್​ ಪ್ಲ್ಯಾನ್​ ನೀಡಿದ ಎಸ್​. ಶ್ರೀಶಾಂತ್​
Vaibhav Suryavanshi : ಬರೋಬ್ಬರಿ 128 ವರ್ಷಗಳ ಸುದೀರ್ಘ ಅವಧಿಯ ಬಳಿಕ ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್, ಒಲಿಂಪಿಕ್ಸ್‌ಗೆ ಮರಳಲು ಸಂಪೂರ್ಣ ಸಜ್ಜಾಗಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಈ ಮಹಾವೇದಿಕೆಯಲ್ಲಿ ಚಿನ್ನದ ಪದಕ ಗೆಲ್ಲಲು ಭಾರತ ತಂಡವು ಬಲಿಷ್ಠ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಈ ನಡುವೆ, ಭಾರತದ ಪರ ಎರಡು ವಿಶ್ವಕಪ್‌ಗಳನ್ನು ಆಡಿರುವ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರು ಒಲಿಂಪಿಕ್ಸ್ ತಂಡದ ಆಯ್ಕೆ ಕುರಿತಂತೆ ಬಿಸಿಸಿಐ (BCCI) ಆಯ್ಕೆಗಾರರಿಗೆ ಅತ್ಯಂತ ಪ್ರಮುಖ ಹಾಗೂ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಏಕೈಕ ಗುರಿಯೊಂದಿಗೆ ಭಾರತವು ತನ್ನ ಅತ್ಯಂತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಬೇಕು ಮತ್ತು ಈ ಮಹತ್ತರ ಸಾಧನೆಗಾಗಿ ವಿರಾಟ್ ಕೊಹ್ಲಿ ಅವರ ಪುನರಾಗಮನವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಶಾಂತ್ ಅವರು ನಂಬಿದ್ದಾರೆ.
ಅನುಭವಿ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಸದ್ಯದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಜುಗಲ್ಬಂದಿಯು ಒಲಿಂಪಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ಭಾರತ ತಂಡಕ್ಕೆ ಅತ್ಯಂತ ಪರಿಪೂರ್ಣವಾದ ಸಮತೋಲನ ತಂಡವನ್ನು ತಂದುಕೊಡಬಲ್ಲದು ಎಂದು ಶ್ರೀಶಾಂತ್​ ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಮಾತನಾಡಿರುವ ಶ್ರೀಶಾಂತ್, ಆಯ್ಕೆಗಾರರು ವಿರಾಟ್ ಕೊಹ್ಲಿ ಅವರನ್ನು ಟಿ20 ತಂಡದಲ್ಲಿ ಉಳಿಸಿಕೊಳ್ಳಬೇಕು. ಅವರ ಫಿಟ್‌ನೆಸ್ ಒಮ್ಮೆ ನೋಡಿ, ನನ್ನ ಈ ಹೇಳಿಕೆ ವಿವಾದಾತ್ಮಕವಾಗಿ ಕಾಣಿಸಬಹುದು, ಆದರೆ ಒಲಿಂಪಿಕ್ಸ್‌ಗಾಗಿ ಕೊಹ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದು ನಾನು ಆಯ್ಕೆಗಾರರಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.
2024ರ ಟಿ20 ವಿಶ್ವಕಪ್‌ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ, ಭಾರತ ತಂಡ ಟ್ರೋಫಿ ಗೆದ್ದ ತಕ್ಷಣವೇ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಏಕದಿನ ಪಂದ್ಯಗಳಲ್ಲಿ ಹಾಗೂ ಐಪಿಎಲ್​ ಟೂರ್ನಿಗಳಲ್ಲಿ ಅವರ ಅದ್ಭುತ ಪ್ರದರ್ಶನ ಮುಂದುವರಿದಿದೆ. ಅಲ್ಲದೆ, ಕೊಹ್ಲಿ ಅವರ ಫಿಟ್‌ನೆಸ್ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಕೊಹ್ಲಿಯ ಪ್ರದರ್ಶನ ಮತ್ತ ಅವರ ಫಿಟ್​ನೆಸ್​ ನೋಡಿದವರು ಕೊಹ್ಲಿ ಮತ್ತೆ ಟಿ20 ಮಾದರಿಗೆ ಮರಳಬೇಕೆಂಬ ಒತ್ತಾಯಗಳು ಆಗಾಗ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಲೇ ಇವೆ.
ಮತ್ತೊಂದೆಡೆ, ಭಾರತೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಹೊಸದೊಂದು ಮಹಾನ್ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಕೇವಲ 15ರ ಹರೆಯದ ಈ ಯುವ ಆಟಗಾರ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ಬರೋಬ್ಬರಿ 776 ರನ್ ಸಿಡಿಸುವ ಮೂಲಕ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ದಾಖಲೆ ಬರೆದಿದ್ದಾರೆ. ಇವರ ಈ ಅಸಾಧಾರಣ ಹಾಗೂ ಆಕರ್ಷಕ ಪ್ರದರ್ಶನವು ಆಯ್ಕೆಗಾರರ ಮನಗೆದ್ದಿದ್ದು, ಇದೇ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ಐರ್ಲೆಂಡ್​ ಹಾಗೂ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಗೆ ವೈಭವ್​ ಆಯ್ಕೆಯಾಗಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ಉಭಯ ವಿಭಾಗಗಳಲ್ಲೂ ತಲಾ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮಾತ್ರವಲ್ಲದೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸಸ್) ಮತ್ತು ಸ್ಕ್ವಾಷ್ ಕ್ರೀಡೆಗಳನ್ನೂ ಸಹ ಅಧಿಕೃತವಾಗಿ ಸ್ಪರ್ಧಾತ್ಮಕ ಪಟ್ಟಿಗೆ ಸೇರಿಸಲಾಗಿದೆ. ಇನ್ನು ಒಲಿಂಪಿಕ್ಸ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮಾಜಿ ಆಟಗಾರರ ಸಲಹೆಯಂತೆ ವಿರಾಟ್ ಕೊಹ್ಲಿ ಅವರ ಪುನರಾಗಮನವನ್ನು ಬಿಸಿಸಿಐ ಆಯ್ಕೆಗಾರರು ನಿಜವಾಗಿಯೂ ಪರಿಗಣಿಸುತ್ತಾರಾ ಎಂಬುದನ್ನು ನೋಡಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗಿನಿಂದಲೇ ಕುತೂಹಲದಿಂದ ಕಾಯುತ್ತಿದ್ದಾರೆ, (ಏಜೆನ್ಸೀಸ್​).