ಅವನ ವಯಸ್ಸು 15, 16, 17 ಅಥವಾ ಹದಿನೆಂಟೇ ಇರಲಿ ಅದರಿಂದ... ವೈಭವ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಬ್ರೇಟ್ ಲೀ! Vaibhav Sooryavanshi
Vaibhav Sooryavanshi : ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಸಖತ್ ಸದ್ದು ಮಾಡುತ್ತಿರುವ ಯುವ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ವಯಸ್ಸಿನ ಕುರಿತು ಹರಿದಾಡುತ್ತಿರುವ ಚರ್ಚೆಗಳ ಬಗ್ಗೆ ಆಸ್ಟ್ರೇಲಿಯಾದ ದಂತಕಥೆ ಬ್ರೆಟ್ ಲೀ ಮಹತ್ವದ ಹೇಳಿಕೆ ನೀಡಿದ್ದು, ಯುವ ಪ್ರತಿಭೆಯ ಆಟವನ್ನು ಕೊಂಡಾಡಿದ್ದಾರೆ.
ಭಾರತದ ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ 'ಬೀರ್ ಬೈಸೆಪ್ಸ್' (Beer Biceps) ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ, ವೈಭವ್ ಸೂರ್ಯವಂಶಿ ಅವರ ವಯಸ್ಸು 15, 16, 17 ಅಥವಾ 18 ವರ್ಷವಿರಲಿ, ಅದರಿಂದ ತಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ. ಪ್ರಪಂಚದಾದ್ಯಂತ ಎಲ್ಲರೂ ಆತನಿಗೆ ನಿಜಕ್ಕೂ 15 ವರ್ಷವೇ ಎಂದು ಪ್ರಶ್ನಿಸುತ್ತಿದ್ದಾರೆ ಮತ್ತು ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ವೈಭವ್ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ, ಆತನಿಗೆ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡುವ ಅದ್ಭುತ ಸಾಮರ್ಥ್ಯವಿದೆಯೇ ಎಂಬುವುದೇ ಮುಖ್ಯ ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ. ಆಟಗಾರನ ವಯಸ್ಸು ಎಷ್ಟು ಎಂಬುದಕ್ಕಿಂತ ಮೈದಾನದಲ್ಲಿ ಆಡುವ ಆಟ ಮತ್ತು ಪ್ರತಿಭೆ ಮಾತ್ರ ಮುಖ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್‌ನಲ್ಲಿ ವೈಭವ್ ಪ್ರದರ್ಶಿಸಿದ ಆಟವನ್ನು ನೆನಪಿಸಿಕೊಂಡ ಬ್ರೆಟ್ ಲೀ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ಬೆಂಕಿ ಎಸೆತಗಳನ್ನು ಎದುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಕಳಪೆ ಬ್ಯಾಟಿಂಗ್ ತಪ್ಪುಗಳಲ್ಲ, ಬದಲಿಗೆ ಆತನ ಸ್ಥೈರ್ಯ ಮತ್ತು ಯೋಚನಾ ಲಹರಿಯೇ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ವಿಶ್ಲೇಷಿಸಿದ್ದಾರೆ.
ಕೊನೆಯದಾಗಿ, ವೈಭವ್ ಸೂರ್ಯವಂಶಿ ಭಾರತ ಕ್ರಿಕೆಟ್‌ಗೆ ಸಿಕ್ಕಿರುವ ಅಮೂಲ್ಯ ಆಸ್ತಿಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಅನೇಕ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ ಎಂದು ಬ್ರೆಟ್ ಲೀ ಭವಿಷ್ಯ ನುಡಿದಿದ್ದಾರೆ. ಆದರೆ ಅದೇ ಸಮಯದಲ್ಲಿ, ಆಟಗಾರನ ಮೇಲೆ ಯಾವುದೇ ಒತ್ತಡ ಹೇರದೆ ಆತನನ್ನು ಸ್ವಾಭಾವಿಕವಾಗಿ ಬೆಳೆಯಲು ಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್).